ಬೆಂಗಳೂರು: ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ಕಾಂಗ್ರೆಸ್ ಸೇರ್ಪಡೆಗೊಂಡಿರುವ ಸಿ.ಪಿ. ಯೋಗೇಶ್ವರ್, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೈಜೋಡಿಸುವ ಮುಖೇನ ಇದೀಗ ಉಪ ಚುನಾವಣೆಯಲ್ಲಿ (By Election) ಚನ್ನಪಟ್ಟಣದಿಂದ ಸ್ಪರ್ಧಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಇದೇ ಸಮಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣಕ್ಕೆ ಯಾರನ್ನು ನಿಲ್ಲಿಸಬೇಕು ಎಂಬ ಗೊಂದಲ ಪಕ್ಷದಲ್ಲಿ ಮೂಡಿತ್ತು. ಈ ಕುರಿತು ಇಂದು ಸಭೆ ನಡೆಸಿದ ಜೆಡಿಎಸ್, ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ದೃಢವಾಗಿ ನಿರ್ಧರಿಸಿದೆ.
ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಅಧಿಕೃತವಾಗಿ ಘೋಷಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆ ನಡೆಸಿ, ಅಂತಿಮವಾಗಿ ನಿಖಿಲ್ ಹೆಸರನ್ನು ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಹಾಕಿದ ಒತ್ತಾಯಕ್ಕೆ ಮಣಿದು, ಇದೀಗ ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ರನ್ನು ಸ್ಪರ್ಧೆಗೆ ಇಳಿಸುತ್ತೇವೆ ಎಂದು ಮಾಜಿ ಸಿಎಂ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಒಂದೆಡೆ ಕಾಂಗ್ರೆಸ್ ಪಡೆಯಿಂದ ಸಿ.ಪಿ. ಯೋಗೇಶ್ವರ್ ಅಖಾಡಕ್ಕೆ ಧುಮುಕಿದರೆ, ಮತ್ತೊಂದೆಡೆ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಇವರಿಬ್ಬರ ನಡುವೆ ಇದೀಗ ನೇರ ಹಣಾಹಣಿ ನಡೆಯಲಿದ್ದು, ಯಾರ ಭಾಗಕ್ಕೆ ಗೆಲುವು ಸಿಗಲಿದೆ ಎಂಬುದು ಸದ್ಯ ರಾಜ್ಯ ರಾಜಕೀಯದಲ್ಲಿ ದೊಡ್ಡ ಕುತೂಹಲವನ್ನೇ ಹುಟ್ಟುಹಾಕಿದೆ.