ನ್ಯೂಸ್

ಒಂದು ಕೋಟಿ ಹಣದೊಂದಿಗೆ ಲವರ್ ಜೊತೆ ಎಸ್ಕೇಪ್!: ತಿಂಗಳ ಬಳಿಕ ಮಗಳ ವಿರುದ್ಧ ದೂರು ನೀಡಿದ ಉದ್ಯಮಿ

ಬೆಂಗಳೂರು: ಒಂದು ತಿಂಗಳ ಹಿಂದೆ ತನ್ನ ಪ್ರಿಯಕರನ ಜತೆ ಪರಾರಿಯಾಗುವ ಮೊದಲು 19 ವರ್ಷದ ಮಗಳು ಮನೆಯಲ್ಲಿದ್ದ ಸುಮಾರು ಒಂದು ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಾಟನ್ ಪೇಟೆ ನಿವಾಸಿಯೂ ಆಗಿರುವ ಟೆಕ್ಸ್‌ಟೈಲ್ಸ್‌ ಉದ್ಯಮಿ ಗಂಗಾಧರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಗಂಗಾಧರ್‌, ತಮ್ಮ ಪುತ್ರಿ ಕಲಾ (ಹೆಸರು ಬದಲಾಯಿಸಲಾಗಿದೆ) ಪಿಯು ವಿದ್ಯಾರ್ಥಿನಿಯಾಗಿದ್ದು, 29 ವರ್ಷದ ನರೇಶ್ (ಹೆಸರು ಬದಲಾಯಿಸಲಾಗಿದೆ) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಏಪ್ರಿಲ್ 21 ರಂದು ರಾತ್ರಿ ಮಲಗುವುದಕ್ಕೆ ತನ್ನ ಕೋಣೆಗೆ ಹೋಗಿದ್ದ ಆಕೆ ಮಾರನೇ ದಿನ ಬೆಳಗ್ಗಿನ ವೇಳೆ ನಾಪತ್ತೆಯಾಗಿದ್ದಳು.

ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ಉದ್ಯಮಿ ಗಂಗಾಧರ್ ಹಾಗೂ ಕುಟುಂಬ ಮಗಳಿಗಾಗಿ ಹುಡುಕಾಟ ನಡೆಸಿ ಅಂದೇ ಪೊಲೀಸರಿಗೆ ಮಗಳು ನಾಪತ್ತೆಯಾದ ಬಗ್ಗೆ ಕಾಟನ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೇ ಆಕೆ ನರೇಶ್ ಜೊತೆ ಓಡಿ ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಕುಟುಂಬಸ್ಥರ ಬಳಿ ಯುವತಿ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆಯೇ ಎಂದು ವಿಚಾರಣೆ ನಡೆಸಿದ್ದಳು. ಈ ವೇಳೆ ಗಂಗಾಧರ್ ಪತ್ನಿ ಮನೆಯ ಅಮೂಲ್ಯವಸ್ತುಗಳಿರುವ ಜಾಗವನ್ನು ತಪಾಸಣೆ ಮಾಡಿ, ಆಭರಣಗಳೆಲ್ಲವೂ ಇದೆ ಯಾವುದನ್ನೂ ಆಕೆ ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದ್ದರು.

ಇದಾದ ನಂತರ ಕಲಾ ಹಾಗೂ ನರೇಶ್ ಓಡಿ ಹೋಗಿ ಮದ್ವೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೆ ತಮ್ಮ ಪುತ್ರಿ 19 ವರ್ಷ ವಯಸ್ಸಾಗಿದ್ದು ಮತ್ತು ಮದುವೆಗೆ ಯಾರು ಬಲವಂತವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಗಂಗಾಧರ್ ಮತ್ತು ಅವರ ಸಂಬಂಧಿಕರು ದಂಪತಿಗೆ ತೊಂದರೆ ನೀಡುವುದಿಲ್ಲ ಎಂದು ಹೇಳಿದರು. ಆದರೆ ಆಕೆಗೆ ನಾವು ಯಾವುದೇ ಆಸ್ತಿಯನ್ನು ನೀಡುವುದಿಲ್ಲ, ಅಲ್ಲದೇ ಆಕೆ ಅಗತ್ಯವಿರುವ ದಾಖಲೆಗಳಿಗೆ ಸಹಿ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಆಕೆಯೂ ಒಪ್ಪಿಕೊಂಡಿದ್ದು, ಬಳಿಕ ಕುಟುಂಬದಿಂದ ಯುವತಿ ದೂರಾಗಿದ್ದಳು.