ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಭವಿಷ್ಯದ ಉದ್ಯಮ
‘‘ಹಣ ಜಾಸ್ತಿ ಖರ್ಚಾದರೂ ಪರವಾಗಿಲ್ಲ, ಆರೋಗ್ಯ ಮುಖ್ಯ’’ ಎನ್ನುವ ಜನ ಇತ್ತೀಚೆಗೆ ಹೆಚ್ಚಾಗುತ್ತಿದ್ದು ನಿರ್ದಿಷ್ಟ ಆಹಾರ ಪದ್ಧತಿಯತ್ತ ಒಲವು ತೋರುತ್ತಿದ್ದಾರೆ. ಸಾವಯವ ಆಹಾರಕ್ಕೆ ಸದ್ಯೋಭವಿಷ್ಯದಲ್ಲಿ ಉತ್ತಮ ಮಾರುಕಟ್ಟೆ ಇದೆ ಎಂಬುದಕ್ಕೆ ಇದು ಮುನ್ಸೂಚನೆ. ವರ್ಷದಿಂದ ವರ್ಷಕ್ಕೆ ಸಾವಯವ ಆಹಾರದ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯಕ್ಕೆ ರಾಜ್ಯದಲ್ಲಿ ಸಾವಯವ ಆಹಾರ ಬಳಕೆದಾರರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ. 3ರಷ್ಟು ಮಾತ್ರ ಇದ್ದರೂ ಇದು ಮುಂದಿನ 20 ವರ್ಷಗಳಲ್ಲಿ ಶೇ. 80ಕ್ಕೆ ಏರುವ ನಿರೀಕ್ಷೆ ಇದೆ. ಹೆಚ್ಚಿನ ಜನರು ಸಾವಯವ ಉತ್ಪನ್ನಗಳನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಖಚಿತ. ಸಾವಯವ ಕೃಷಿಯ ಬಗ್ಗೆ ತಿಳಿದುಕೊಂಡು, ರೈತರ ಜತೆ ನಿಕಟ ಸಂಪರ್ಕ ಹೊಂದಿ ಈ ಬಿಸಿನೆಸ್ ಆರಂಭಿಸಿದರೆ ಭವಿಷ್ಯದಲ್ಲಿ ಹಣ ತನ್ನಿಂತಾನೇ ಹರಿದುಬರುತ್ತದೆ. ಸಾವಯವ ಉತ್ಪನ್ನಗಳ ಮಾರಾಟಕ್ಕೆ ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳನ್ನು ಅವಲಂಬಿಸಿದರೆ ಯಶಸ್ಸು ಸಾಧ್ಯವಿಲ್ಲ. ಏಕೆಂದರೆ ಗ್ರಾಹಕರ ಅನುಮಾನಗಳನ್ನು ಸ್ಥಳದಲ್ಲೇ ಮುಖತಃ ಪರಿಹರಿಸಬೇಕಾಗುತ್ತದೆ. ಈ ವ್ಯವಹಾರಕ್ಕೆ ಹೆಚ್ಚಿನ ಬಂಡವಾಳವೇನೂ ಬೇಕಾಗುವುದಿಲ್ಲ. ಆದರೆ ಗ್ರಾಹಕರನ್ನು ನೇರವಾಗಿ ಸಂರ್ಪಸಿ ಉತ್ಪನ್ನಗಳನ್ನು ವಿತರಿಸುವುದು ಮುಖ್ಯ. ಆಗ ಮಾತ್ರ ಈ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ.
| ಮಧು ಚಂದನ್ ಸಂಸ್ಥಾಪಕ, ಆರ್ಗ್ಯಾನಿಕ್ ಮಂಡ್ಯ ಸಂಸ್ಥೆ