ನ್ಯೂಸ್

ವ್ಯಾಪಾರದ ಸ್ಥಿತಿ-ಗತಿಗಳು

ಬಾಬುಪ್ರಸಾದ್​ ಮೋಡಿಸ್​
ಲೋಕೋದ್ಧಾರಕ ಪ್ರವಾದಿ(ಸ) ಮಹಮ್ಮದ್ ಒಮ್ಮೆ ಸಹಚರರಿಗೆ ಹೀಗೆ ಹೇಳುತ್ತಾರೆ: ‘ಈ ಜಗತ್ತಿನಲ್ಲಿ ಮೂವರೊಂದಿಗೆ ನಿರ್ಣಾಯಕ ದಿನದಂದು ಅಲ್ಲಾಹನು ಮಾತನಾಡುವುದಿಲ್ಲ. ಅವರ ಕಡೆ ಮುಖವೆತ್ತಿಯೂ ನೋಡಲಾರ. ಅವರನ್ನು ಶುಚಿಗೊಳಿಸಿ, ಸ್ವರ್ಗಕ್ಕೆ ಕಳುಹಿಸಲಾರ. ಅಲ್ಲದೆ ಅವರಿಗೆ ಕಠಿಣ ಶಿಕ್ಷೆ ನೀಡುತ್ತಾನೆ’.

ಇದನ್ನು ಆಲಿಸಿದ ಅಬೂದರ(ರ) ನೀವು ಪ್ರಸ್ತಾಪಿಸಿದ ಆ ನತದೃಷ್ಟ ವ್ಯಕ್ತಿಗಳು ಯಾರು? ಎಂದು ಪ್ರಶ್ನಸಿಸುತ್ತಾನೆ. ಪ್ರವಾದಿ (ಸ) ಮಹಮ್ಮದ್, ದುರಹಂಕಾರದಿಂದ ಕಾಲಿನ ಮಣಿಗಂಟಿನ ಕೆಳಗೆ ಲುಂಗಿ ಇಳಿಬಿಡುವವನು. ಅದರಿಂದ ಲುಂಗಿ ದಾರಿಯನ್ನೆಲ್ಲ ಗುಡಿಸಿಕೊಂಡು ಹೋಗಿ ಗಲೀಜಾಗುತ್ತದೆ. ಇನ್ನೊಬ್ಬ ಉಪಕಾರ ಮಾಡಿದ ನಂತರ ಉಪಕಾರದ ಭಾರವನ್ನು ಇರಿಸುವವನು, ಹಾಗೂ ಜನರೊಡನೆ ಸುಳ್ಳು ಆಣೆ ಹಾಕಿ ತನ್ನ ವ್ಯಾಪಾರವನ್ನು ಬೆಳಗಿಸುವವನು ಎನ್ನುತ್ತಾರೆ.

ಪ್ರವಾದಿ(ಸ) ಅವರ ಪ್ರಕಾರ ವ್ಯಾಪಾರ ಮಾಡುವಾಗ ಹೆಚ್ಚು ಆಣೆ ಹಾಕಬಾರದು. ಅದನ್ನು ಬಿಟ್ಟುಬಿಡಬೇಕು. ಈ ಆಣೆ ಹಾಕುವುದು ವ್ಯಾಪಾರವನ್ನು ತಾತ್ಕಾಲಿಕವಾಗಿ ಹೆಚ್ಚು ಮಾಡಬಹುದು, ಆದರೆ ಅಂತ್ಯದಲ್ಲಿ ಸಮೃದ್ಧಿ ಎನ್ನುವುದು(ಬರ್ಕತ್) ಹೊರಟು ಹೋಗುತ್ತದೆ.

ಸುಳ್ಳು ಆಣೆ ವ್ಯಾಪಾರ ಕುಸಿಯಲೂ ಕಾರಣವಾಗುತ್ತದೆ. ಜನತೆಯನ್ನು ಯಾವಾಗಲೂ ಮೋಸ ಮಾಡಲು ಸಾಧ್ಯವಿಲ್ಲ. ಕುಟಿಲೋಪಾಯದಿಂದ ಸಮೃದ್ಧಿ ನಾಶವಾಗುತ್ತದೆ. ಅಬೂ ಸ ಈದ್ ಖುದ್ರಿ(ರ) ಎಂಬ ಭಕ್ತರು ಪ್ರವಾದಿ ಅವರ ಮಾತನ್ನು ಪುನರುಚ್ಚರಿಸುತ್ತಾರೆ. ಸತ್ಯಸಂಧರೂ, ಪ್ರಾಮಾಣಿಕರು ಆದ ವ್ಯಾಪಾರಿಗಳು ಪ್ರವಾದಿಗಳ, ಹುತಾತ್ಮರ ಜತೆಯಲ್ಲಿರುವವರು. ಅಬೂ ಹುರೈರಾ(ರ) ಉಲ್ಲೇಖಿಸಿದಂತೆ ಪ್ರವಾದಿ(ಸ) ಒಮ್ಮೆ ಹೀಗೆ ಹೇಳಿದರು: ‘ವಿವಿಧ ಕಾರ್ಯಗಳನ್ನು ಮಾಡುವ ಕಾರ್ವಿುಕರು ತಮ್ಮ ತಮ್ಮ ಯಜಮಾನರ ಹಿತಚಿಂತನೆಯಿಂದಲೂ, ನಿಷ್ಠೆಯಿಂದಲೂ ಮಾಡಿದರೆ ಅವರ ಸಂಪಾದನೆ ಶ್ರೇಷ್ಠವೂ, ಅತ್ಯುತ್ತಮಮಟ್ಟದ್ದೂ ಆಗುತ್ತದೆ.

ಕಷ್ಟಪಟ್ಟು ದುಡಿದು ಸಂಪಾದಿಸುವ ಮುಸ್ಲಿಮನನ್ನು ಅಲ್ಲಾಹನು ಪ್ರೀತಿಸುತ್ತಾನೆ, ಗೌರವಿಸುತ್ತಾನೆ. ಕ್ರಯ ವಿಕ್ರಯದ ವೇಳೆ ಹಾಗೂ ಸಾಲ ವಸೂಲಿ ಮಾಡುವ ವಿಷಯದಲ್ಲಿ ಮೃದುನೀತಿ ಮತ್ತು ಸದ್ವರ್ತನೆ ಕೈಗೊಂಡರೆ ಅಂತಹ ವ್ಯಕ್ತಿಯೊಂದಿಗೆ ಅಲ್ಲಾಹನು ಕರುಣೆಯಿಂದ ವರ್ತಿಸುವನು’.