ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಹೂಗ್ಯಂನಿಂದ ಹನೂರಿಗೆ ಸಂಜೆ ವೇಳೆಗೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಬಾರದ ಕಾರಣ ಕಳೆದ 2 ದಿನಗಳಿಂದ ವಿದ್ಯಾರ್ಥಿಗಳು ನಡೆದೇ ಸಾಗುತ್ತಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದಾರೆ.
ಹೂಗ್ಯಂ ಮಾರ್ಗವು ಕಾಡಂಚಿನಿಂದ ಕೂಡಿದ್ದು, ಈ ಭಾಗದ ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಬೆರಳೆಣಿಕೆ ಬಸ್‌ಗಳಷ್ಟೇ ಸಂಚರಿಸುತ್ತವೆ. ಇದರಿಂದ ಈ ಭಾಗದ ಜನರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗ್ಗೆ ಶಾಲಾ ಅವಧಿ ಹಾಗೂ ಸಂಜೆ ಶಾಲಾ ಅವಧಿ ಮುಗಿಯುವ ಹೊತ್ತಿಗೆ ಸಾರಿಗೆ ಬಸ್ ಬಿಡಲಾಗಿತ್ತು. ಮಿಣ್ಯಂ ಸರ್ಕಾರಿ ಪ್ರೌಢಶಾಲೆಗೆ ಆಗಮಿಸುವ ಕಾಡಂಚಿನ ಗ್ರಾಮಗಳಾದ ಗಾಜನೂರು, ಕೊಪ್ಪ, ಸೂಳೆಕೋಬೆ ಹಾಗೂ ನಕ್ಕುಂದಿ ಗ್ರಾಮದ ವಿದ್ಯಾರ್ಥಿಗಳು ಈ ಬಸ್ಸನ್ನೇ ಅವಲಂಬಿಸಿದ್ದರು. ಜತೆಗೆ ರಾಮಾಪುರ ಹನೂರು, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಂದ ಈ ಮಾರ್ಗದ ಶಾಲೆಗಳಿಗೆ ಆಗಮಿಸುತ್ತಿದ್ದ ಶಿಕ್ಷಕರು ಸಹ ಈ ಬಸ್ಸಿನ ಮೂಲಕ ತೆರಳುತ್ತಿದ್ದರು. ಆದರೆ ಕಳೆದ 2 ದಿನಗಳಿಂದ ಸಂಜೆ 4.30ಕ್ಕೆ ಹೂಗ್ಯನಿಂದ ಹನೂರಿನ ಕಡೆಗೆ ಸಂಚರಿಸುತ್ತಿದ್ದ ಬಸ್ ಬರುತ್ತಿಲ್ಲ. ಇದರಿಂದ ಶಿಕ್ಷಕರು ವಿಧಿಯಿಲ್ಲದೆ ಬೇರೊಬ್ಬರ ಬೈಕ್‌ನಲ್ಲಿ ತೆರಳಿದರೆ, ವಿದ್ಯಾರ್ಥಿಗಳು ನಡೆದೇ ಸಾಗುವಂತಾಗಿದೆ. ಈ ಬಗ್ಗೆ ಬಸ್ ಚಾಲಕ, ನಿರ್ವಾಕರನ್ನು ವಿಚಾರಿಸಿದರೆ ರಿಪೇರಿಯಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗಿದೆ.
ಸಾರಿಗೆ ಬಸ್ ಬಾರದ ಕಾರಣ ಮಕ್ಕಳು ನಡೆಯುವಂತಾಗಿದೆ. ಆದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸಂಜೆ ವೇಳೆಗೆ ಎಂದಿನಂತೆ ಬಸ್ ಬಿಡುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಈ ಭಾಗದ ಪಾಲಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.