ನ್ಯೂಸ್

ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

Haveri - Kariyappa Aralikatti

ರಾಣೆಬೆನ್ನೂರ: ನಗರದ ಹೊರವಲಯದ ಹಲಗೇರಿ ರಸ್ತೆಯ ಎಸ್.ಆರ್.ಕೆ ಬಡಾವಣೆ ಹತ್ತಿರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಹಾಗೂ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಬಾಲಕಿಯರ ವಸತಿ ನಿಲಯವಿದ್ದು 150 ವಿದ್ಯಾರ್ಥಿನಿಯರು ನಗರದ ವಿವಿಧ ಕಾಲೇಜುಗಳಿಗೆ ನಿತ್ಯವೂ ತೆರಳುತ್ತಾರೆ. ಅಧಿಕೃತವಾಗಿ ಕೋರಿಕೆ ನಿಲುಗಡೆಗೆ ಅವಕಾಶವಿದ್ದು ವಿದ್ಯಾರ್ಥಿನಿಯರನ್ನು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹತ್ತಿಸಿಕೊಂಡು ವಸತಿ ನಿಲಯಕ್ಕೆ ನಿಲ್ಲಿಸದೆ 8 ಕಿಮೀ ದೂರದ ಹಲಗೇರಿ ಗ್ರಾಮಕ್ಕೆ ಬಿಡುತ್ತಾರೆ. ಇಲ್ಲವೇ ನಡು ರಸ್ತೆಯಲ್ಲಿ ಇಳಿಸಿ ಹೋಗುತ್ತಾರೆ.
ಹೀಗಾಗಿ ಹಲಗೇರಿ ಮಾರ್ಗವಾಗಿ ತೆರಳುವ ಶಿಕಾರಿಪುರ, ರಟ್ಟಿಹಳ್ಳಿ, ಮಾಸೂರ ಹಿರೆಕೇರೂರ, ಅಂತರವಳ್ಳಿ ಸೇರಿದಂತೆ ಎಲ್ಲ ಬಸ್‌ಗಳು ಕಡ್ಡಾಯವಾಗಿ ನಿಲ್ಲಿಸಲು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಂದ ಬಸ್ ನಿಲ್ದಾಣ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಬಸ್ ನಿಲ್ದಾಣದ ನಿರ್ವಾಹಕ ಉಮೇಶ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಮುಖಂಡರಾದ ಗೌತಮ್ ಸಾವಕ್ಕನವರ, ವೀರೇಶ ಹನುಮನಮಟ್ಟಿ, ಸಂಗೀತಾ ಲಮಾಣಿ, ದ್ರಾಕ್ಷಾಯಿಣಿ, ಅಶ್ವಿನಿ ಯು. ಟಿ., ಮಂಜುಳಾ ಬಿ., ರೂಪಾ ಎಸ್.ಬಿ., ಪ್ರತಿಭಾ ಗೊಣೆಪ್ಪನವರ, ಅಶ್ವಿನಿ ಆರ್, ದ್ಯಾಮಕ್ಕ ಚವ್ಹಣ್ಣನವರ, ಪ್ರಿಯಾ ಯು.ಟಿ. ಮತ್ತಿತರರು ಪಾಲ್ಗೊಂಡಿದ್ದರು.ತಿ ನಿಲಯದ ಮೇಲ್ವಿಚಾರಕಿ ಪ್ರಭಾವತಿ ಅಲಗಣ್ಣನವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.