ನ್ಯೂಸ್

ಪ್ರಯಾಣಿಕರ ತಂಗುದಾಣಕ್ಕೆ ‘ದಿಗ್ಬಂಧನ’: ಕಾವು ಜಂಕ್ಷನ್ ಬಳಿ ದ್ವಿಚಕ್ರ ವಾಹನ ನಿಲುಗಡೆಯಿಂದ ಸಮಸ್ಯೆ

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸುವ ಕಾರ್ಯ ಸ್ಥಳೀಯಾಡಳಿತಗಳ ಮೂಲಕ ಆಗುತ್ತಿದೆ. ಆದರೆ ಮಾಡ್ನೂರು ಗ್ರಾಮದ ಕಾವು ಜಂಕ್ಷನ್ ಬಳಿ ಇರುವ ಪ್ರಯಾಣಿಕರ ತಂಗುದಾಣ ದ್ವಿಚಕ್ರ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಡುತ್ತಿದ್ದು, ಇಲ್ಲಿನ ‘ದಿಗ್ಭಂಧನ’ ವ್ಯವಸ್ಥೆಯಿಂದಾಗಿ ತಂಗುದಾಣ ಪ್ರಯೋಜನಕ್ಕಿಲ್ಲದಂತಾಗಿದೆ.

ಕಾವು ಜಂಕ್ಷನ್(ಈಶ್ವರಮಂಗಲ ತಿರುವು ರಸ್ತೆ ಭಾಗ) ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರಿಯಡ್ಕ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಎದುರು ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ಪ್ರಯಾಣಿಕರು ತಂಗುದಾಣದೊಳಗೆ ಪ್ರವೇಶಿಸದಂತಹ ಸ್ಥಿತಿ ನಿರ್ಮಾಣವಾಗಿದೆ.

ಕಾವು ಜಂಕ್ಷನ್ ಬಳಿಯಿಂದ ಪುತ್ತೂರು ಕಡೆಗೆ ಹೋಗುವವರಿಗಂತೂ ವಾಹನಗಳಿಗಾಗಿ ಕಾಯಲು ಪ್ರಯಾಣಿಕರ ತಂಗುದಾಣದ ವ್ಯವಸ್ಥೆ ಇಲ್ಲ. ಹಾಗಾಗಿ ಪುತ್ತೂರು ಕಡೆಗೆ ಹೋಗುವವರಿಗೆ ರಸ್ತೆ ಬದಿಯೇ ಗತಿ. ಹೆದ್ದಾರಿಯ ಮತ್ತೊಂದು ಬದಿಯಲ್ಲಿರುವ ಸುಳ್ಯ, ಮಡಿಕೇರಿ, ಪೆರ್ಲಂಪಾಡಿ ಕಡೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣವೂ ಈಗ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ನಿಲುಗಡೆ ಮಾಡಲಾಗುತ್ತಿರುವ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪ.

ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ

ಈಶ್ವರಮಂಗಲ, ಕಾವು ಭಾಗದಿಂದ ದಿನ ನಿತ್ಯ ಪುತ್ತೂರು, ಸುಳ್ಯ ಕಡೆಗೆ ಉದ್ಯೋಗ, ವ್ಯವಹಾರ, ಅಗತ್ಯ ಕಾರ್ಯಗಳ ಹಿನ್ನೆಲೆಯಲ್ಲಿ ಹೋಗುವ ನೂರಾರು ಮಂದಿ ಇದ್ದಾರೆ. ಹೆಚ್ಚಿನವರು ದ್ವಿಚಕ್ರ ವಾಹನಗಳಲ್ಲಿ ಬಂದು ಪ್ರಯಾಣಿಕರ ತಂಗುದಾಣದ ಎದುರು ವಾಹನ ನಿಲ್ಲಿಸಿ, ನಂತರ ಬಸ್‌ಗಳಲ್ಲಿ ಹೋಗುತ್ತಿದ್ದಾರೆ. ಈ ಮಂದಿಗೂ ಸಮಸ್ಯೆಯಾಗದ ರೀತಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೂ ಕಾವು ವ್ಯಾಪ್ತಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಪ್ರಯಾಣಿಕರ ತಂಗುದಾಣದ ದಿಗ್ಬಂಧನ ತಡೆಯಬೇಕು. ಪ್ರಯಾಣಿಕರ ತಂಗುದಾಣವನ್ನು ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹ.

ಪ್ರಯಾಣಿಕರ ತಂಗುದಾಣದಿಂದ ಪ್ರಯಾಣಿಕರಿಗೆ ಅನುಕೂಲವಾಗಬೇಕು. ಈ ಕುರಿತು ಪರಿಶೀಲಿಸಿ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ತಂಗುದಾಣದ ಎದುರು ವಾಹನ ನಿಲುಗಡೆ ನಿಷೇಧಿಸಿ ಪಂಚಾಯಿತಿ ವತಿಯಿಂದ ಬೋರ್ಡ್ ಅಳವಡಿಸಲಾಗುವುದು. ಸಂತೋಷ್ ಮಣಿಯಾಣಿ ಕುತ್ಯಾಡಿ, ಅರಿಯಡ್ಕ ಗ್ರಾಪಂ ಅಧ್ಯಕ್ಷ https://www.vijayavani.net/inauguration-of-keyuru-temple-link-road https://www.vijayavani.net/inauguration-of-the-new-building-of-vani-educational-institutions