ನ್ಯೂಸ್

ಬಸ್ ಪುಟ್ ಬೋರ್ಡ್ ಪ್ರಯಾಣ ತಡೆಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ

Haveri - Kariyappa Aralikatti

ಹಾವೇರಿ: ಜಿಲ್ಲೆಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈಗಾಗಲೇ ಸಾರಿಗೆ ಇಲಾಖೆಯಿಂದ ಹೊಸ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಶೀಘ್ರವೇ ಜಿಲ್ಲೆಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳು ಪೂರೈಕೆಯಾಗಲಿವೆ. ಪ್ರಸ್ತುತ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ರಸ್ತೆ ಸಂಚಾರ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಬಸ್ ಪ್ರಯಾಣಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಬಸ್‌ಗಳ ಪುಟ್‌ಬೋರ್ಡ್ ಪ್ರಯಾಣ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಸಹಕಾರ ಪಡೆಯಲು ಸೂಚನೆ ನೀಡಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಹಾವೇರಿ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಲಾಖೆಯ ಮಾಹಿತಿಂತೆ ಹಾವೇರಿ ಬಸ್ ನಿಲ್ದಾಣ, ಲಕಮಾಪೂರ ಬಸ್ ನಿಲ್ದಾಣ, ಆರ್.ಟಿ.ಒ. ಕಚೇರಿ, ಗುತ್ತಲ ರಸ್ತೆಯ ರೈಲ್ವೆ ಬ್ರಿಜ್ ಹತ್ತಿರ, ಹಾನಗಲ್ಲ ಬೈಪಾಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ.
ಇದೇ ರೀತಿ ರಾಣೆಬೆನ್ನೂರ ಬಸ್ ನಿಲ್ದಾಣ, ಆರ್.ಟಿ.ಇ.ಎಸ್ ಕಾಲೇಜು, ಹಲಗೇರಿ ಕ್ರಾಸ್, ಹಾನಗಲ್ಲ ಬಸ್ ನಿಲ್ದಾಣ, ಸರ್ಕಾರಿ ಪದವಿ ಕಾಲೇಜು, ಕುಮಾರಿಸ್ವಾಮಿ ಮಠದ ಹತ್ತಿರ, ಬ್ಯಾಡಗಿ ಬಸ್ ನಿಲ್ದಾಣ, ಮೊಟೇಬೆನ್ನೂರ ಪದವಿ ಕಾಲೇಜ್ ಹತ್ತಿರ, ಹಿರೇಕೆರೂರು ಬಸ್ ನಿಲ್ದಾಣ, ಚವಡಿ ಹಾಗೂ ಬಾಳಂಬೀಡ ಸರ್ಕಲ್, ಸವಣೂರ ಬಸ್ ನಿಲ್ದಾಣ, ವಿ.ಕೃ.ಗೋಕಾಕ ವೃತ್ತ ಹಾಗೂ ಶಿಗ್ಗಾಂವಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಹಾಗೂ ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಕಾರಣ ಈ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸುರಕ್ಷತಾ ಪ್ರಯಾಣಕ್ಕೆ ಅನುವುಮಾಡಿಕೊಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಮಾಸಾಂತ್ಯಕ್ಕೆ 510 ವಾಹನಗಳಿಂದ 506 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಕನಿಷ್ಠ ಶೇ.3 ರಷ್ಟು ಹೆಚ್ಚುವರಿ ವಾಹನಗಳು ಅಗತ್ಯವಾಗಿದೆ. ಪ್ರಸ್ತುತ ಹೆಚ್ಚುವರಿ ವಾಹನಗಳ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಠ 30 ವಾಹನಗಳು ಅಗತ್ಯವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ಸಂಚಾರಿ ಅಧಿಕಾರಿ ಅಶೋಕ ಪಾಟೀಲ ಅವರು ಮಾಹಿತಿ ನೀಡಿದರು.