ನ್ಯೂಸ್

ಪ್ರಯಾಣಿಕರ ಉಳಿಸಿ ಪ್ರಾಣ ಬಿಟ್ಟ ಚಾಲಕ

ಶಿಕಾರಿಪುರ: ಹೃದಯಾಘಾತಕ್ಕೊಳಗಾದ ಚಾಲಕರೊಬ್ಬರು 30 ಜನರ ಪ್ರಾಣ ಉಳಿಸಿ ಸಾವಿಗೀಡಾಗಿದ್ದಾರೆ.

ಶಿಕಾರಿಪುರ ತಾಲೂಕು ಬಗನಕಟ್ಟೆಯ ಚಾಲಕ ಕುಮಾರ್ (30) ಮೃತರು. ಬುಧವಾರ ಬೆಳಗ್ಗೆ 9.30ಕ್ಕೆ ಶಿಕಾರಿಪುರದಿಂದ ಹೊನ್ನಾಳಿಗೆ ಎಂದಿನಂತೆ ಕುಮಾರ್ ಖಾಸಗಿ ಬಸ್ ಚಲಾಯಿಸಿ ಕೊಂಡು ಹೊರಟಿದ್ದರು. ಬಸ್​ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ಶಿಕಾರಿಪುರ ದಿಂದ ಕೇವಲ ಮೂರು ಕಿ.ಮೀ. ಮುಂದೆ ಚಲಿಸಿದ್ದು, ಈವೇಳೆ ಕುಮಾರ್​ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.

ಒಂದು ಕೈಯಲ್ಲಿ ಎದೆ ಹಿಡಿದುಕೊಂಡು ಬಸ್ ನಿಯಂತ್ರಿಸಲಾಗದೆ ಒದ್ದಾಡುವುದನ್ನು ಮುಂಬದಿ ಸೀಟಿನಲ್ಲಿರುವ ಪ್ರಯಾಣಿಕರು ಕಂಡು ಗಾಬರಿಯಾಗಿದ್ದಾರೆ. ಎದೆನೋವಿನಲ್ಲಿಯೇ ಪ್ರಯಾಣಿಕರ ಜೀವಕ್ಕೆ ತೊಂದರೆ ಆಗಬಾರದೆಂದು ರಸ್ತೆಯ ಪಕ್ಕಕ್ಕೆ ಬಸ್ ಇಳಿಸಿದ್ದಾನೆ. ಆದರೂ ಬಸ್ ನಿಯಂತ್ರಣಕ್ಕೆ ಬಂದಿಲ್ಲ. ಕೊನೆಗೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನೆ. ಬಳಿಕ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಮ್ಮನ್ನು ರಕ್ಷಣೆ ಮಾಡಿ ಪ್ರಾಣ ತ್ಯಾಗ ಮಾಡಿದ ಬಸ್ ಚಾಲಕ ಕುಮಾರ್​ನನ್ನು ಕಂಡು ಪ್ರಯಾಣಿಕರು ಕಣ್ಣೀರಿಟ್ಟರು. ಶಿಕಾರಿಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.