ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರ ಮಾಸ್ಟ್‌ಮ್ಯಾನ್ ಚಿನ್ನಯ್ಯ ಅವರಿಗೆ ಪರೋಕ್ಷ ಬೆದರಿಕೆ ಹಾಗೂ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 
ನ್ಯೂಸ್

ಚಿನ್ನಯ್ಯಗೆ ಬುರುಡೆ ಗ್ಯಾಂಗ್‌ನಿಂದ ಜೀವಬೆದರಿಕೆ

ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರ ಮಾಸ್ಟ್‌ಮ್ಯಾನ್ ಚಿನ್ನಯ್ಯ ಅವರಿಗೆ ಪರೋಕ್ಷ ಬೆದರಿಕೆ ಹಾಗೂ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಧರ್ಮಸ್ಥಳದ ಶವ ಹೂತಿಟ್ಟ ವಿವಾದಾತ್ಮಕ ಪ್ರಕರಣವು ದಿನಕ್ಕೊಂದು ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪ್ರಕರಣದ ಪ್ರಮುಖ ಕೊಂಡಿಯಾಗಿರುವ ಮಾಸ್ಟ್‌ಮ್ಯಾನ್ ಚಿನ್ನಯ್ಯ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ (ಹೈಕೋರ್ಟ್) ರಿಟ್ ಅರ್ಜಿ ಸಲ್ಲಿಸಿದ ನಂತರ ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ. ತನಗಾಗುತ್ತಿರುವ ಮಾನಸಿಕ ಕಿರುಕುಳ ಮತ್ತು ಪ್ರಾಣಭಯದ ಹಿನ್ನೆಲೆಯಲ್ಲಿ, ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡದ (ಖಿ) ಕಚೇರಿಗೆ ಸೋಮವಾರ ಭೇಟಿ ನೀಡಿದ ಚಿನ್ನಯ್ಯ, ತನಿಖಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ರತ್ನಾ ಕೂಡ ಜೊತೆಯಲ್ಲಿದ್ದರು.
*ಯೂಟ್ಯೂಬರ್ ಮತ್ತು ಗಿರೀಶ್ ಮಟ್ಟಣ್ಣನವರ್ ವಿರುದ್ಧ ಗಂಭೀರ ದೂರು
ಚಿನ್ನಯ್ಯ ಅವರು ಎಸ್‌ಐಟಿಗೆ ನೀಡಿರುವ ದೂರಿನಲ್ಲಿ ಇಬ್ಬರು ಪ್ರಮುಖ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿದ್ದು, ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್ ಹಾಗೂ ಗಿರೀಶ್ ಮಟ್ಟಣ್ಣನವರ್ ಎಂಬುವವರು ತನ್ನ ಮೇಲೆ ಸತತವಾಗಿ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನೀವು ರಿಟ್ ಅರ್ಜಿ ಸಲ್ಲಿಸಲು ಪ್ರೇರಣೆ ಯಾರು? ಈ ಅರ್ಜಿಯ ಹಿಂದೆ ಯಾರಿದ್ದಾರೆ? ನಿಮಗೆ ಆರ್ಥಿಕವಾಗಿ ಅಥವಾ ಇನ್ನಿತರ ರೂಪದಲ್ಲಿ ಸಹಾಯ ಮಾಡುತ್ತಿರುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಪದೇ ಪದೇ ಕೇಳಿ ತನ್ನನ್ನು ಕಟುವಾಗಿ ಪ್ರಶ್ನಿಸಲಾಗುತ್ತಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಚಿನ್ನಯ್ಯ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
-----------------
ಕುಟುಂಬದ ಮಾಹಿತಿ ಸಂಗ್ರಹ, ಪರೋಕ್ಷ ಬೆದರಿಕೆ ತಂತ್ರ
ಬೆದರಿಕೆ ಹಾಕುತ್ತಿರುವ ವ್ಯಕ್ತಿಗಳು ಕೇವಲ ಪ್ರಶ್ನೆಗಳನ್ನು ಕೇಳುವುದಕ್ಕಷ್ಟೇ ಸೀಮಿತವಾಗದೆ, ಚಿನ್ನಯ್ಯ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ನೇರವಾಗಿ ಮಾತನಾಡುವಂತೆ ಬಲವಂತಪಡಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಚಿನ್ನಯ್ಯ ಅವರ ಕುಟುಂಬದ ಸದಸ್ಯರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಸೂಕ್ಷ್ಮ ಮಾಹಿತಿಗಳನ್ನೂ ಕಲೆಹಾಕಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ತನಗೆ ಪರೋಕ್ಷವಾಗಿ ಜೀವಬೆದರಿಕೆ ಒಡ್ಡುವ ಮತ್ತು ಮಾನಸಿಕವಾಗಿ ಕುಗ್ಗಿಸುವ ವ್ಯವಸ್ಥಿತ ತಂತ್ರಗಾರಿಕೆಯಾಗಿದೆ ಎಂದು ಚಿನ್ನಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
-------------------
ಹೈಕೋರ್ಟ್ ನೋಟಿಸ್ ಬೆನ್ನಲ್ಲೇ ಹೆಚ್ಚಿದ ಬುರುಡೆ ಗ್ಯಾಂಗ್ ಆರ್ಭಟ!
ಧರ್ಮಸ್ಥಳ ಪ್ರಕರಣದ ತನಿಖೆಯು ನನೆಗುದಿಗೆ ಬಿದ್ದಿರುವುದನ್ನು ಪ್ರಶ್ನಿಸಿ ಚಿನ್ನಯ್ಯ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಈವರೆಗೆ ನಡೆಸಿರುವ ತನಿಖೆಯ ಪ್ರಗತಿ ಮತ್ತು ಸದ್ಯದ ಸ್ಥಿತಿಗತಿಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಕಡಾಖಂಡಿತವಾಗಿ ನಿರ್ದೇಶನ ನೀಡಿದೆ. ಉನ್ನತ ನ್ಯಾಯಾಲಯದಿಂದ ಈ ಮಹತ್ವದ ಆದೇಶ ಹೊರಬೀಳುತ್ತಿದ್ದಂತೆ ಕಂಗಾಲಾಗಿರುವ ಪ್ರಕರಣದ ಇತರ ಆರೋಪಿಗಳು ಹಾಗೂ ’ಬುರುಡೆ ಗ್ಯಾಂಗ್’ನ ಕೆಲವು ವ್ಯಕ್ತಿಗಳು ತನಿಖೆಯ ಹಾದಿ ತಪ್ಪಿಸಲು ಮತ್ತು ಅರ್ಜಿದಾರರನ್ನು ಹೆದರಿಸಲು ಚಿನ್ನಯ್ಯ ಕುಟುಂಬದವರನ್ನು ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಿ ತೀವ್ರವಾಗಿ ಬೆದರಿಸುತ್ತಿದ್ದಾರೆ ಎನ್ನಲಾಗಿದೆ.
-----------------
ಎಸ್‌ಐಟಿಯಿಂದ ತನಿಖೆ ಚುರುಕು
ತನ್ನ ಮತ್ತು ತನ್ನ ಪತ್ನಿಯ ಜೀವಕ್ಕೆ ಯಾವುದೇ ಕ್ಷಣದಲ್ಲೂ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಚಿನ್ನಯ್ಯ, ಆರೋಪಿತ ಯೂಟ್ಯೂಬರ್ ಅಭಿಷೇಕ್ ಹಾಗೂ ಗಿರೀಶ್ ಮಟ್ಟಣ್ಣನವರ್ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹೈಕೋರ್ಟ್ ಆದೇಶದಂತೆ ತನಿಖೆ ಮುಗಿಯುವವರೆಗೆ ತಮಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಎಸ್‌ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಚಿನ್ನಯ್ಯ ಸಲ್ಲಿಸಿರುವ ಈ ಸ್ಫೋಟಕ ದೂರಿನಿಂದಾಗಿ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆಗೆ ಈಗ ಮತ್ತೊಂದು ಹೊಸ ಹಾಗೂ ಮಹತ್ವದ ಆಯಾಮ ಸಿಕ್ಕಂತಾಗಿದೆ. ಈ ಹೊಸ ದೂರಿನ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಬೆದರಿಕೆ ಹಾಕಿರುವ ಆರೋಪಿಗಳ ಪತ್ತೆಗೆ ಹಾಗೂ ದೂರಿನ ಸತ್ಯಾಸತ್ಯತೆಯ ಪರಿಶೀಲನೆಗೆ ತನಿಖೆಯನ್ನು ತೀವ್ರಗೊಳಿಸುವ ಸಾಧ್ಯತೆ ದಟ್ಟವಾಗಿದೆ.
------------------