ನ್ಯೂಸ್

ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ರಾಣೆಬೆನ್ನೂರ: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ತಾಲೂಕಿನ ಕುಮಾರಪಟ್ಟಣ ಠಾಣೆ ಪೊಲೀಸರು ಆತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಅಮರಪ್ಪನ ತೋಟದ ನಿವಾಸಿ ಸನಾವುಲ್ಲಾ ಖಾದರಸಾಬ (56) ಬಂಧಿತ ಆರೋಪಿ. ಈತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ 60 ಸಾವಿರ ರೂ. ಮೌಲ್ಯದ ಇತರ ಬೆಳೆಬಾಳುವ ವಸ್ತು ಜಪ್ತಿ ಮಾಡಲಾಗಿದೆ. ಆರೋಪಿಯು ಏಪ್ರಿಲ್​ 24ರಂದು ಎಣ್ಣೆಹೊಸಳ್ಳಿ ಗ್ರಾಮದ ಹನುಮಂತಪ್ಪ ಪೂಜಾರ ಎಂಬುವರ ಮನೆ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿ ಬರೋಬ್ಬರಿ 3.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ. ಈ ಕುರಿತು ಕುಮಾರಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗಾಗಿ ಎಸ್ಪಿ ಅಂಶಕುಮಾರ ಹಾಗೂ ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ತಾಲೂಕಿನ ಕುಮಾರಪಟ್ಟಣ ಪಿಎಸ್​ಐ ಪ್ರವಿಣಕುಮಾರ ವಾಲೀಕಾರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಆರೋಪಿಯನ್ನು ಪತ್ತೆ ಮಾಡಿದೆ. ಆರೋಪಿ ವಿರುದ್ಧ ಅರಸೀಕೆರೆ ಠಾಣೆ ವ್ಯಾಪ್ತಿಯಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಅದನ್ನು ಸಹ ಇಲ್ಲಿಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಯಾದ ಎಚ್​.ಎಂ. ತಹಸೀಲ್ದಾರ್​, ಸಿ.ಸಿ. ಹಿಟಬುತ್ತಿ, ಇ.ಬಿ. ವಾಸನದ, ಬಿ.ವೈ. ತಹಸೀಲ್ದಾರ್​, ಕೆ.ಕೆ. ಗಸ್ತೇರ, ಚಂದ್ರಶೇಖರ ಅಂಬಿಗೇರ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.