ದೇಶದ ನಾಲ್ಕು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ಉಚಿತ ಕೊಡುಗೆಗಳ ಹೆಸರಿನಲ್ಲಿ ಸಹಾಯಧನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇದರಿಂದ ರಾಜ್ಯಗಳು ಸಾಲದ ಸುಳಿಗೆ ಸಿಲುಕುತ್ತಿವೆ. ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಹೆಚ್ಚುತ್ತಿರುವುದು ಕಳವಳದ ವಿಚಾರ. ಆಂಧ್ರಪ್ರದೇಶದಲ್ಲಿ ಸಹಾಯಧನ ಪ್ರಮಾಣ ಕಳೆದ ಎರಡು ವರ್ಷಗಳಲ್ಲೇ ನಾಲ್ಕು ಪಟ್ಟು ಮತ್ತು ಪಂಜಾಬ್ನಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಸಬ್ಸಿಡಿ ಪ್ರಮಾಣದ ಶೇಕಡ 81ರಷ್ಟನ್ನು ದೇಶದ ಹತ್ತು ರಾಜ್ಯಗಳೇ ನೀಡುತ್ತಿವೆ. ಇತ್ತೀಚಿನ ವರದಿಯ ಪ್ರಕಾರ, ಅತಿ ಹೆಚ್ಚು ಸಬ್ಸಿಡಿಯನ್ನು ಪಂಜಾಬ್ನಲ್ಲಿ (ತಲಾ ವ್ಯಕ್ತಿಗೆ ಸರಾಸರಿ 7,428 ರೂ.) ನೀಡಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಇಲ್ಲಿ ಪ್ರತಿ ವ್ಯಕ್ತಿಗೆ 4,274 ರೂ. ಸಹಾಯಧನ ಸಿಗುತ್ತಿದೆ. ಮೂರನೇ ಸ್ಥಾನದಲ್ಲಿರುವ ಗುಜರಾತಿನಲ್ಲಿ 4,272, ನಾಲ್ಕನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 3,840 ರೂ. ಸಬ್ಸಿಡಿ ಸಿಗುತ್ತಿದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮುನ್ನ ಎಲ್ಲ ಪಕ್ಷಗಳು ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿವೆ. ಆದರೆ, ಈ ಆಶ್ವಾಸನೆಗಳನ್ನು ಈಡೇರಿಸಲು ದುಡ್ಡು ಎಲ್ಲಿಂದ ಬರುತ್ತದೆ, ಆರ್ಥಿಕ ಸಂಪನ್ಮೂಲ ಸಂಗ್ರಹದ ಹೊಸ ದಾರಿಗಳು ಯಾವವು ಎಂಬುದನ್ನು ಯಾವ ಪಕ್ಷಗಳೂ, ಸರ್ಕಾರಗಳೂ ಸ್ಪಷ್ಟಪಡಿಸಿಲ್ಲ. ಈ ಭರವಸೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಗಳ ಬಳಿ ಸಾಲ ಮಾಡುವ ಆಯ್ಕೆ ಬಿಟ್ಟರೆ ಬೇರೆ ಮಾರ್ಗವಿಲ್ಲ ಎನ್ನುತ್ತಾರೆ ವಿತ್ತೀಯ ತಜ್ಞರು. ಅಂದರೆ, ಸಹಾಯಧನದ ಪ್ರಮಾಣ ಹೆಚ್ಚಾದಷ್ಟು ಸಾಲದ ಹೊರೆ ಹೆಚ್ಚಾಗುತ್ತದೆ. ಅನುದಾನ ಹಂಚಿಕೆಯಲ್ಲಿ ಅಸಮತೋಲನ ಕಂಡುಬರುತ್ತದೆ. ಅಭಿವೃದ್ಧಿ ಕಾರ್ಯಗಳ ಮೇಲೆ, ವಿವಿಧ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಸರ್ಕಾರಗಳ ಪ್ರಮುಖ ಗಮನ ಉಚಿತ ಕೊಡುಗೆಗಳತ್ತ ಇರುವುದರಿಂದ, ಆರ್ಥಿಕತೆ ಹೊಸ ಸವಾಲುಗಳನ್ನು ಎದುರಿಸಲಿದೆ ಮತ್ತು ಈ ಟ್ರೆಂಡ್ ಸಣ್ಣ, ದೊಡ್ಡ ರಾಜ್ಯಗಳು ಎಂಬ ಭೇದವಿಲ್ಲದೆ ಎಲ್ಲ ರಾಜ್ಯಗಳಿಗೂ ಹರಡುತ್ತಿದೆ ಎನ್ನುತ್ತಾರೆ ವಿತ್ತೀಯ ತಜ್ಞರು. ‘ಸಾಮಾಜಿಕ ಕಲ್ಯಾಣ ಯೋಜನೆಗಳು ಬೇರೆ, ಉಚಿತ ಕೊಡುಗೆಗಳು ಬೇರೆ. ಇವುಗಳಲ್ಲಿನ ವ್ಯತ್ಯಾಸ ಸೂಕ್ಷ್ಮವಾದರೂ, ಅವುಗಳನ್ನು ಸರ್ಕಾರಗಳು ಅರಿತುಕೊಳ್ಳಬೇಕು. ಸಬ್ಸಿಡಿಯ ಪ್ರಮಾಣ ಹೀಗೇ ಹೆಚ್ಚುತ್ತ ಹೋದರೆ ಸಾಲ ಮಾಡುವುದೇ ರಾಜ್ಯಗಳ ಕೆಲಸವಾಗುತ್ತದೆ. ಇದರಿಂದ, ಮುಂಬರುವ ವರ್ಷಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ, ವಿತ್ತೀಯ ಶಿಸ್ತನ್ನು ಅಳವಡಿಸಿಕೊಂಡು, ಜಾರಿಗೆ ತರುವುದು ಮುಖ್ಯ’ ಎನ್ನುತ್ತಾರೆ ಬ್ಯಾಂಕಿಂಗ್ ರಂಗದ ತಜ್ಞರು.
ರಾಜ್ಯದಲ್ಲಿ ಏಳೇ ತಿಂಗಳಲ್ಲಿ 7,399 ಕೋಟಿ ರೂ. ಸಾಲ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳುಗಳಾಗಿದೆ ಅಷ್ಟೇ. ಆದರೆ, ಈ ಅಲ್ಪಾವಧಿಯಲ್ಲಿ ಆಗಿರುವ ಸಾಲದ ಪ್ರಮಾಣ ಮಾತ್ರ ಹೆಚ್ಚು. ಅಧಿಕಾರಕ್ಕೆ ಬಂದ ಏಳೇ ತಿಂಗಳಲ್ಲಿ 7,399.60 ಕೋಟಿ ರೂ. ಸಾಲ ಪಡೆಯಲಾಗಿದೆ. 2023ರ ಸೆಪ್ಟೆಂಬರ್ ಅಂತ್ಯಕ್ಕೆ 1191.10 ಕೋಟಿ ರೂ. ಸಾಲ ಪಡೆದಿದ್ದ ರಾಜ್ಯ ಸರ್ಕಾರ, ಅಕ್ಟೋಬರ್ ಅಂತ್ಯಕ್ಕೆ 6,208.5 ಕೋಟಿ ರೂ. ಸಾಲ ಪಡೆದಿದೆ. ಆದರೆ, 2024ರ ಮಾರ್ಚ್ ಒಳಗೆ 85 ಸಾವಿರ ಕೋಟಿ ರೂ. ಸಾಲ ಪಡೆಯುವ ಪ್ರಸ್ತಾಪವನ್ನು, ಜುಲೈನಲ್ಲಿ ಮಂಡಿಸಲಾದ ಬಜೆಟ್ನಲ್ಲಿ ಮಾಡಲಾಗಿದೆ. ಹೀಗಾಗಿ, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಸಾಲದ ಹೊರೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
ಕೇಂದ್ರದಿಂದ ಕೂಡ ಸಹಾಯಧನ ದ್ವಿಗುಣ: ಕೇಂದ್ರ ಸರ್ಕಾರದಿಂದ ನೀಡಲಾಗುವ ಸಬ್ಸಿಡಿ ಪ್ರಮಾಣದಲ್ಲೂ ಭಾರಿ ಏರಿಕೆ ಕಂಡುಬಂದಿದೆ. 10 ವರ್ಷಗಳಲ್ಲಿ 2.5 ಲಕ್ಷ ಕೋಟಿ ರೂ.ಯಿಂದ 5.7 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ರಾಜ್ಯಗಳಿಂದ ನೀಡಲಾಗುವ ಸಹಾಯಧನ 3.1 ಲಕ್ಷ ಕೋಟಿ ರೂ. ಇದರಿಂದ ಸಾಲದ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಬಡ್ಡಿ ಪಾವತಿಗಾಗಿಯೇ ಸರ್ಕಾರಗಳು ಆದಾಯದ ಶೇಕಡ 20-30ರಷ್ಟು ವೆಚ್ಚ ಮಾಡುತ್ತಿವೆ. ನಾಲ್ಕೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಯಾವುದೇ ಸರ್ಕಾರ ತೆರಿಗೆ ಹೆಚ್ಚಳದ ಕ್ರಮಕ್ಕೆ ಮುಂದಾಗುತ್ತಿಲ್ಲ.