ಹೈದರಾಬಾದ್: ಬರೋಬ್ಬರಿ 1 ಕೋಟಿ ರೂ. ಲಂಚ ಪಡೆಯುವಾಗ ತೆಲಂಗಾಣದ ತಹಸೀಲ್ದಾರ್ ಒಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಮೆಡ್ಚಲ್-ಮಲ್ಕಜ್ಗಿರಿ ಜಿಲ್ಲೆಯ ಕೇಸರ ಮಂಡಲದಲ್ಲಿ ತಹಸೀಲ್ದಾರ್ ಅಥವಾ ಮಂಡಲ ಕಂದಾಯ ಅಧಿಕಾರಿಯಾಗಿರುವ ಎರ್ವ ಬಾಲರಾಜು ನಾಗರಾಜು ಎಂಬ ಭ್ರಷ್ಟ ಅಧಿಕಾರಿ ರಿಯಲ್ ಎಸ್ಟೇಟ್ ಡೀಲರ್ಗಳ ಬಳಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಜಮೀನು ವಿವಾದವನ್ನು ಬಗೆಹರಿಸಿಕೊಡಲು ಸುಮಾರು 2 ಕೋಟಿ ರೂ.ಗೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಕೇಸರ ಮಂಡಲದ ದಯಾರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ 28 ಎಕರೆ ಜಮೀನು ವಿವಾದದಲ್ಲಿತ್ತು. ಗ್ರಾಮದ ಕೆಲವರು ಕೋರ್ಟಿನಲ್ಲಿ ದಾವೆ ಹೂಡಿ ತಮ್ಮ ಪರವಾಗಿ ಮಾಡಿಕೊಂಡಿದ್ದರು. ಆದಾಗ್ಯೂ, ರಿಯಲ್ ಎಸ್ಟೇಟ್ ಡೀಲರ್ಗಳ ಪರವಾಗಿ ಜಮೀನು ಮಾಡಿಕೊಡುವುದಾಗಿ ಹೇಳಿ ಅವರಿಗೆ ತಹಸೀಲ್ದಾರ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.
ಡೀಲರ್ಗಳು ಹಾಗೂ ತಹಸೀಲ್ದಾರ್ ನಡುವಿನ ರಹಸ್ಯ ಒಪ್ಪಂದದ ಬಗ್ಗೆ ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಹೈದರಾಬಾದ್ನ ಎಎಸ್ ರಾವ್ ನಗರದ ತಮ್ಮ ಬಾಡಿಗೆ ಮನೆಯಲ್ಲಿ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇವರೊಂದಿಗೆ ಇಬ್ಬರು ರಿಯಲ್ ಎಸ್ಟೇಟ್ ಡೀಲರ್ಗಳಾದ ಶ್ರೀನಾಥ್ ಮತ್ತು ಅಂಜಿ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೆ, ಗ್ರಾಮದ ಸಹಾಯಕ ಕಂದಾಯ ಅಧಿಕಾರಿ ಸಾಯಿರಾಜ್ ಸಹ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಎರಡು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಅದರ ಭಾಗವಾಗಿ ಒಂದು ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಮನೆಯನ್ನು ಹುಡುಕಾಡಿದಾಗ ಹೆಚ್ಚುವರಿಯಾಗಿ 28 ಲಕ್ಷ ರೂ. ಪತ್ತೆಯಾಗಿದೆ. ಅಲ್ಲದೆ, ಭಾರಿ ಮೌಲ್ಯದ ಚಿನ್ನ ಮತ್ತು ಲಾಕರ್ ಕೀ ಸಹ ಪತ್ತೆಯಾಗಿದೆ ಎಂದು ಎಸಿ ಡಿಸಿಪಿ ಸೂರ್ಯನಾರಾಯಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)