ನ್ಯೂಸ್

ಮೂರನೇ ದಿನವೂ ಗುಳಿಯ ಗುಟುರು: ಷೇರು ಸೂಚ್ಯಂಕ ಮತ್ತೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ

ಮುಂಬೈ: ಷೇರು ಮಾರುಕಟ್ಟೆ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ವಹಿವಾಟು ದಿನವಾದ ಬುಧವಾರ ಏರುಪ್ರವೃತ್ತಿಯಲ್ಲಿ ಸಾಗಿದವು. ಏಷ್ಯಾದ ಇತರ ಮಾರುಕಟ್ಟೆಗಳ ಏರುಗತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿನ ಖರೀದಿಯೊಂದಿಗೆ ಹೊಸ ಸಾರ್ವಕಾಲಿಕ ಮಟ್ಟ ಮುಟ್ಟಿದವು. ಕಳೆದ ಮೂರು ದಿನಗಳ ರ್ಯಾಲಿಯಲ್ಲಿ ಹೂಡಿಕೆದಾರರ ಸಂಪತ್ತು 2.53 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿದೆ.

30-ಷೇರುಗಳ ಬಿಎಸ್‌ಇ ಸೂಚ್ಯಂಕ 620.73 ಅಂಕಗಳು ಅಥವಾ 0.80 ಪ್ರತಿಶತದಷ್ಟು ಏರಿಕೆಯಾಗಿ 78,674.25 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟ ತಲುಪಿತು. ದಿನದ ವಹಿವಾಟಿನಲ್ಲಿ ಇದು 705.88 ಅಂಕಗಳು ಅಥವಾ ಶೇ. 0.90 ಏರಿಕೆಯಾಗಿ 78,759.40 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.

ನಿಫ್ಟಿ 50 ಸೂಚ್ಯಂಕವು 147.50 ಅಂಕಗಳು ಅಥವಾ ಶೇ. 0.62 ರಷ್ಟು ಏರಿಕೆಯಾಗಿ 23,868.80 ರ ದಾಖಲೆಯ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ಇಂಟ್ರಾ-ಡೇ ವಹಿವಾಟಿನಲ್ಲಿ ಇದು 168.6 ಅಂಕಗಳು ಅಥವಾ ಶೇ. 0.71 ರಷ್ಟು ಏರಿಕೆಯಾಗಿ 23,889.90ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು.

ಪ್ರಮುಖ ಷೇರುಗಳ ಪೈಕಿ, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಅದಾನಿ ಪೋರ್ಟ್ಸ್, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಮತ್ತು ಬಜಾಜ್ ಫೈನಾನ್ಸ್ ಹೆಚ್ಚು ಲಾಭ ಗಳಿಸಿದವು. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳ ಬೆಲೆ ಹಿನ್ನಡೆ ಕಂಡವು.

ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ. 0.15 ರಷ್ಟು ಏರಿದರೆ, ಮಿಡ್‌ಕ್ಯಾಪ್ ಸೂಚ್ಯಂಕ ಶೇ. 0.29 ರಷ್ಟು ಕುಸಿತ ಕಂಡಿತು. ವಲಯವಾರು ಸೂಚ್ಯಂಕಗಳ ಪೈಕಿ ದೂರಸಂಪರ್ಕ ಶೇ. 2.30, ಇಂಧನ (ಶೇ. 1.45), ಟೆಕ್ (ಶೇ.0.78), ಬ್ಯಾಂಕೆಕ್ಸ್ (ಶೇ. 0.58) ಮತ್ತು ಸೇವೆಗಳು (ಶೇ. 0.46) ಜಿಗಿದವು. ಸರಕುಗಳು, ಗ್ರಾಹಕ ವಿವೇಚನೆ, ಐಟಿ ಮತ್ತು ಆಟೋ ವಲಯದ ಷೇರುಗಳು ಹಿನ್ನಡೆ ಅನುಭವಿಸಿದವು.

ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್​ಕಾಂಗ್ ಲಾಭ ಗಳಿಸಿದವು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ನೋಟ ಇತ್ತು. ಮಂಗಳವಾರದಂದು ಅಮೆರಿಕ ಮಾರುಕಟ್ಟೆಗಳು ಏರಿಕೆ ದಾಖಲಿಸಿದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 1,175.91 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

ಮಂಗಳವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 712.44 ಅಂಕಗಳು ಅಥವಾ ಶೇ. 0.92 ಜಿಗಿದು 78,053.52 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 183.45 ಅಂಕಗಳು ಅಥವಾ 0.78 ರಷ್ಟು ಏರಿಕೆಯಾಗಿ 23,721.30 ಕ್ಕೆ ಸ್ಥಿರವಾಗಿತ್ತು.