ಶಿಕಾರಿಪುರ: ರಾಜ್ಯದ ವಿವಿಧೆಡೆ ನಡೆಯುವ ಹೋರಿ ಹಬ್ಬಗಳಲ್ಲಿ ಸ್ಪರ್ಧಿಸಿ ಅನೇಕ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದ ತಾಲೂಕಿನ ಗಾಂಧಿನಗರದ ಹೋರಿ ಬುಲೆಟ್ ಮಹಾರಾಜ್ (20) ವಯೋಸಹಜ ಕಾಯಿಲೆಯಿಂದ ಸೋಮವಾರ ಮೃತಪಟ್ಟಿದೆ.
ಹೋರಿ ಹಬ್ಬದ ಅಭಿಮಾನಿಗಳ ಪೈಕಿ ಹಲವರು ಈ ಹೊರಿಯನ್ನು ಇಷ್ಟಪಡುತ್ತಿದ್ದರು. ಈಗ ಮಹಾರಾಜ್‌ನ ನಿಧನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಬ್ಬದಲ್ಲಿ ಅತ್ಯಂತ ವೇಗವಾಗಿ ಓಡುತ್ತಿತ್ತು. ಬಹುಮಾನದಲ್ಲಿ ಬುಲೆಟ್ ಗೆದ್ದ ಮೊದಲ ಹೋರಿ ಇದಾಗಿದ್ದರಿಂದ ಇದಕ್ಕೆ ಬುಲೆಟ್ ಮಹಾರಾಜ್ ಎಂಬ ಹೆಸರು ಬಂದಿತ್ತು.
ಹೋದ ಕಡೆಯಲ್ಲೆಲ್ಲ ಬಹುಮಾನ ಗಳಿಸಿ ತನ್ನ ಮಾಲೀಕ ಕುಮಾರ್‌ಗೆ ಹೆಸರು ತಂದುಕೊಟ್ಟಿತ್ತು. ಮಹಾರಾಜ್ ಹೋರಿಯನ್ನು 2013ರಲ್ಲಿ ಹಾನಗಲ್ನಿಂದ ಗಾಂಧಿನಗರಕ್ಕೆ ತರಲಾಗಿತ್ತು. ತಂದ ಮೊದಲ ವರ್ಷವೇ ಏಳು ಕಡೆ ಹಬ್ಬದಲ್ಲಿ ಬಂಪರ್ ಬಹುಮಾನ ಪಡೆದಿತ್ತು. ನಂತರ ಮಾಸೂರಿನಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಬಂಪರ್ ಬಹುಮಾನ ಪಡೆದು ಬಂಗಾರದ ಸರ, ಬೈಕ್, ಟಿವಿಯನ್ನು ಬಹುಮಾನವಾಗಿ ಗಳಿಸಿತ್ತು. ಪೀಪಿ ಕಟ್ಟಿ ಓಡುವ, ಒಣಕೊಬ್ಬರಿ ಸರ ಕಟ್ಟಿ ಓಡುವ ಮತ್ತು ವೇಗವಾಗಿ ಓಡುವ ಮೂರೂ ವಿಭಾಗದಲ್ಲೂ ಮೊದಲ ಸ್ಥಾನ ಪಡೆದಿತ್ತು. ಇದು ತಾಲೂಕಿನಲ್ಲಿ ಪಿಪಿ ಕಟ್ಟಿ ಓಡಿಸಿದ ಮೊದಲ ಹೋರಿ. ಇದರ ಸ್ಪೀಡ್‌ಗೆ ತಮಿಳುನಾಡಿನವರು ಮನಸೋತು ಜಲ್ಲಿಕಟ್ಟುಗಾಗಿ ಕೇಳಿದ್ದರು. ಆದರೆ ಮಾಲೀಕ ಕುಮಾರ್ ವಾತ್ಸಲ್ಯದಿಂದ ಬೆಳಸಿದ ಕಾರಣ ಕೊಟ್ಟಿರಲಿಲ್ಲ. ಸೋಮವಾರ ಮೃತಪಟ್ಟ ಹೋರಿಯನ್ನು ಮಾಲೀಕ ಕುಮಾರ್ ತಮ್ಮ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕುಮಾರ್ ಸಾಕಿದ ಒಂದು ಹೋರಿ ಈ ಹಿಂದೆ ತಮಿಳುನಾಡಿನವರಿಗೆ 20 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು.