ನ್ಯೂಸ್

ತಿರುಮಲದಲ್ಲಿ ಸುಸಜ್ಜಿತ ಭವನ ಸೆಪ್ಟೆಂಬರ್‌ಗೆ ಸಜ್ಜು: ಸಚಿವ ರಾಮಲಿಂಗಾರೆಡ್ಡಿ | VIP rooms block

ಬೆಂಗಳೂರು: ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲದಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸುತ್ತಿರುವ 36 ಸುಸಜ್ಜಿತ ವಿಐಪಿ ಕೊಠಡಿಗಳ ಮೊದಲ ಬ್ಲಾಕ್ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಇದೇ ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ತಿರುಮಲದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ವಿಐಪಿ ಬ್ಲಾಕ್ ಜತೆಗೆ ಜೀಣೋದ್ಧಾರವಾದ ಕಲ್ಯಾಣಿ ಮತ್ತು ದೇವಸ್ಥಾನವನ್ನು ಸಿಎಂ, ಡಿಸಿಎಂ ಉದ್ಘಾಟಿಸಲಿದ್ದು, ಭಕ್ತರ ಬಹು ದಿನಗಳ ಕನಸು ನನಸಾಗಲಿದೆ ಎಂದರು.

ವಿಐಪಿ, ವಿವಿಐಪಿ ಕೊಠಡಿಗಳ ಐದು ಬ್ಲಾಕ್‌ಗಳು ಸೇರಿ 202 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಲಾಗಿದೆ. ಕಲ್ಯಾಣ ಮಂಟಪ ಉದ್ಘಾಟನೆಯಾಗಿದ್ದು, ಇನ್ನುಳಿದ ಮೂರು ಕೆಲಸಗಳು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಂಡು ಭಕ್ತರ ಸೇವೆಗೆ ಸಜ್ಜಾಗಲಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಆನ್‌ಲೈನ್ ಬುಕ್ಕಿಂಗ್

ಶ್ರೀಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ನಿರ್ಮಿಸುವ ಮೂಲಕ ತಿರುಮಲಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸಿದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಮುಂಗಡ ಕಾಯ್ದಿರಿಸುವುದಕ್ಕೆ ಆನ್‌ಲೈನ್ ಸೇವೆಯೂ ಲಭ್ಯವಿದೆ ಎಂದು ಹೇಳಿದರು.

ಕಲ್ಯಾಣ ಮಂಟಪವು 500 ಆಸನಗಳ ಸಾಮರ್ಥ್ಯ ಹೊಂದಿದ್ದು, 13 ಕೊಠಡಿಗಳಿವೆ. ತಿರುಮಲ ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಮದುವೆ, ನಾಮಕರಣ ಮುಂತಾದ ಶುಭ ಸಮಾರಂಭ ಏರ್ಪಡಿಸಲು ಬಯಸುವ ಕರ್ನಾಟಕದ ಜನರಿಗೆ ಲಭ್ಯವಿರಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಮುಜರಾಯಿ ಇಲಾಖೆ ಆಯುಕ್ತ ವಿ.ವೆಂಕಟೇಶ, ಇನ್ನಿತರ ಮುಖಂಡರು, ಅಧಿಕಾರಿಗಳು ಇದ್ದರು.