ಶಿವಮೊಗ್ಗ: ತಂಬಾಕು ಸೇವನೆಯಿಂದ ತನ್ನ ಆರೋಗ್ಯ ಮಾತ್ರವಲ್ಲ, ಸುತ್ತಮುತ್ತಲಿನ ಆರೋಗ್ಯವೂ ಕೆಡುತ್ತದೆ. ತಂಬಾಕು ಮುಕ್ತ ಜೀವನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಆಶ್ರಯದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003 ಪರಿಣಾಮಕಾರಿ ಅನುಷ್ಠಾನ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತದೆ. ತಂಬಾಕು, ಬೀಡಿ, ಸಿಗರೇಟು ಸೇದುವುದು ತನಗೆ ಮಾತ್ರವಲ್ಲ ಅಕ್ಕಪಕ್ಕದವರ ಮೇಲೆ, ಸುತ್ತಮುತ್ತಲಿನ ವಾತಾವರಣದ ಮೇಲೆ ಸಹ ದುಷ್ಪರಿಣಾಮ ಬೀರುತ್ತದೆ. ಈ ವಿಷಯವನ್ನು ಸಮುದಾಯ ಆರೋಗ್ಯಾಧಿಕಾರಿಗಳು ಎಲ್ಲರಿಗೂ ಮುಟ್ಟಿಸಬೇಕು. ತಂಬಾಕು ಬಳಕೆ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.
ಯುವ ಸಮೂಹ ತಂಬಾಕು ಚಟಕ್ಕೆ ಬೀಳದಂತೆ ನೋಡಿಕೊಳ್ಳಬೇಕು. ಸಮುದಾಯ ಆರೋಗ್ಯಾಧಿಕಾರಿಗಳು ಜನ ಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ತಿಳಿಸಬೇಕು. ಆಗ ಇಂತಹ ಕಾರ್ಯಾಗಾರಗಳು ಯಶಸ್ಸು ಕಾಣುತ್ತವೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಓ.ಮಲ್ಲಪ್ಪ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಶಾಲಾ ತರಬೇತಿ, ಕೋಟ್ಪಾ ಪ್ರಕರಣದ ಡ್ರೈವ್‌ಗಳು, ವಿವಿಧ ಅಧಿಕಾರಿಗಳಿಗೆ ತರಬೇತಿ, ಮಾಹಿತಿ, ಶಿಕ್ಷಣ ಸಂಪರ್ಕ ಕಾರ್ಯಕ್ರಮಗಳು ಮತ್ತು ತಂಬಾಕು ವ್ಯಸನಮುಕ್ತಿ ಸೇವೆಗಳು ಜಾರಿಯಲ್ಲಿವೆ. 2016ರಿಂದ ಇಲ್ಲಿಯವರೆಗೆ 700 ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಲಾಗಿದೆ. ಸುಮಾರು 50 ಸಾವಿರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದಿದ್ದು 389 ವಿದ್ಯಾಸಂಸ್ಥೆಗಳನ್ನು ತಂಬಾಕು ಮುಕ್ತ ವಿದ್ಯಾಸಂಸ್ಥೆಗಳೆಂದು ಘೋಷಿಸಲಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎನ್.ಚಂದನ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರ ಹೇಮಂತ್‌ರಾಜ್, ಸಮಾಜ ಕಾರ್ಯಕರ್ತ ರವಿರಾಜು, ಸಮುದಾಯ ಆರೋಗ್ಯಾಧಿಕಾರಿಗಳು ಇತರರು ಹಾಜರಿದ್ದರು.