ಬೆಂಗಳೂರು: ಮಹಾನಗರದಲ್ಲಿ ನಾಗರಿಕರಿಗೆ ಸುರಕ್ಷಿತ ಮತ್ತು ನಡೆಯಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು. ಒಮ್ಮೆ ನಿರ್ಮಿಸಿದ ಬಳಿಕ ಅವುಗಳನ್ನು ಆಗಾಗ್ಗೆ ನಿರ್ವಹಣೆ ಮಾಡಲು ಕಾಳಜಿ ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಮಂಗಳವಾರ ಬೆಳಗ್ಗೆ 6.30ರಿಂದ 8.30 ರವರೆಗೆ ಮೆಜೆಸ್ಟಿಕ್ ಸುತ್ತಮುತ್ತಲಿನ ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ ಹಾಗೂ ಟ್ಯಾಂಕ್ ಬಂಡ್ ರಸ್ತೆ ಸೇರಿ 2.5 ಕಿ.ಮೀ. ದೂರದ ಪಾದಚಾರಿ ಮಾರ್ಗವನ್ನು ನಡಿಗೆಯ ಮೂಲಕ ಪರಿಶೀಲಿಸಿದ ಮುಖ್ಯ ಆಯುಕ್ತರು, ಸ್ಥಳೀಯ ಸಮಸ್ಯೆಗಳನ್ನು ವಲಯ ಅಧಿಕಾರಿಗಳು ಸೇರಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗ ಪರಿಶೀಲಿಸಿದರು. ಬಸ್ ನಿಲ್ದಾಣದ ಒಳಭಾಗದಲ್ಲಿ ಹೆಚ್ಚುವರಿ ಜಾಗ ಇರುವುದನ್ನು ಗಮನಿಸಿ ಫುಟ್‌ಪಾತ್‌ಅನ್ನು ಅಗಲೀಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ರೀತಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಲೂ ಸಾಕಷ್ಟು ಶೌಚಾಲಯಗಳಿದ್ದರೂ, ಪಾದಚಾರಿ ಮಾರ್ಗಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ಅಲ್ಲಿನ ಸ್ಥಳವು ದುರ್ವಾಸನೆಗೆ ತಿರುಗಿತ್ತು. ಇಲ್ಲೆಲ್ಲ ಸ್ವಚ್ಛತೆ ಮಾಡುವ ಜತೆಗೆ ಪಾದಚಾರಿ ಮಾರ್ಗಗಳಲ್ಲಿ ಮೂತ್ರ ವಿಸರ್ಜಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸ್ಲ್ಯಾಬ್ಸ್ ಅಳವಡಿಸಿ:
ಪಾದಚಾರಿ ಮಾರ್ಗಗಳಲ್ಲಿ ಬಹುತೇಕ ಕಡೆ ಕರ್ಬ್ಸ್ ಹಾಳಾಗಿದ್ದು, ಅವುಗಳನ್ನು ಕೂಡಲೇ ದುರಸ್ತಿಪಡಿಸಬೇಕು. ಒಳಚರಂಡಿಗೆ ಅಳವಡಿಸಿರುವ ಡಕ್ಟ್‌ಗಳ ಮೂಲಕ ಕೊಳಚೆ ನೀರು ಹೊರಬರುತ್ತಿರುವುದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸರಿಪಡಿಸಲು ಸೂಚಿಸಿದರು. ಕೆಲವೆಡೆ ಫುಟ್‌ಪಾತ್ ಮೇಲೆ ತ್ಯಾಜ್ಯ ಸುರಿದಿರುವುದು ಹಾಗೂ ಮರದ ದಿಮ್ಮಗಳು ಹಾಗೆಯೇ ಉಳಿದಿರುವುದನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಯೋಜನಾ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಜಂಟಿ ಆಯುಕ್ತ ಸಂಗಪ್ಪ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ಪಾದಚಾರಿ ಮಾರ್ಗ ಒತ್ತುವರಿ ತೆರವು:
ಉಪ್ಪಾರಪೇಟೆ ಪೊಲೀಸ್ ಠಾಣೆಯ ಬಳಿಯಿರುವ ಶೌಚಾಲಯದ ಪಕ್ಕದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಗೋಡೆ ಭಾಗವನ್ನು ಕಂಡು ಕೂಡಲೇ ತೆರವುಗೊಳಿಸಲು ಸೂಚಿಸಿದರು. ಆನಂತರ ಕೆಲ ನಿಮಿಷಗಳಲ್ಲಿ ಸ್ಥಳೀಯ ಕಾರ್ಯಪಾಲಕ ಅಭಿಯಂತರರು ಜೆಸಿಬಿ ಯಂತ್ರ ತರಿಸಿ ತಕ್ಷಣ ತೆರವುಗೊಳಿಸಲಾಯಿತು. ಮತ್ತೆ ಒತ್ತುವರಿ ಮಾಡದಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಯಿತು.
ಬೀದಿ ಬದಿ ವ್ಯಾಪಾರಿಗಳಿಗೆ ಕಡಿವಾಣ:
ಮೆಜೆಸ್ಟಿಕ್ ಸುತ್ತಮುತ್ತ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳು ಪಾದಚಾರಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯಾಪಾರ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು. ಈಗಾಗಲೇ ಗುರುತಿನ ಚೀಟಿ ನೀಡಿರುವ ವ್ಯಾಪಾರಿಗಳನ್ನು ಬಿಟ್ಟು ಉಳಿದವರಿಗೆ ಕಡಿವಾಣ ಹಾಕಲು ಮಹೇಶ್ವರ್ ರಾವ್ ಖಡಕ್ ಸೂಚನೆ ನೀಡಿದರು.