ಸೊರಬ ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿದರು. ಮಾಧವಿ ಭಂಡಾರಿ, ಸೂಲಗಿತ್ತಿ ಕೆರಿಯಮ್ಮ, ಸುಭಾಷ್ ಕಾನಡೆ ಇದ್ದರು.  
ನ್ಯೂಸ್

ಸಂವಿಧಾನದಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ

ಸೊರಬ: ಸಮಾಜದ ಸುಧಾರಣೆಗೆ ಶ್ರಮಿಸಿದ ಬುದ್ಧ ಮತ್ತು ಬಸವಣ್ಣ ಅವರನ್ನು ದೇವರನ್ನಾಗಿ ಮಾಡಿದಂತೆ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ದೇವರಾಗಿಸುವ ಬದಲು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.

ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ನೀಡಿದ ಸಂವಿಧಾನದಡಿ ಸ್ವಾಭಿಮಾನದ ಬದುಕು ಕಂಡುಕೊಳ್ಳಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಖಂಡಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಅದು ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರ ದಲಿತರ ಏಳಿಗೆ ಸಾಧ್ಯ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ದಲಿತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ಜಗತ್ತಿನಲ್ಲಿ ಅತಿ ಹೆಚ್ಚು ಪದವಿಗಳನ್ನು ಪಡೆದ ಮಹಾಚೇತನ ಡಾ. ಅಂಬೇಡ್ಕರ್. ಅವರಿಗೆ ವಿಶ್ವವೇ ಗೌರವ ನೀಡುತ್ತದೆ. ಅವರ ಜ್ಞಾನ ಭಂಡಾರವನ್ನು ಕಂಡು ದೇಶದ ಸಂವಿಧಾನವನ್ನು ರಚಿಸುವ ಮಹತ್ಕಾರ್ಯ ನೀಡಲಾಯಿತು. ಸಂವಿಧಾನವನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಇಲ್ಲವಾದಲ್ಲಿ ದಲಿತರು ಸಂಕಷ್ಟ ಎದುರಿಸಬೇಕಾಗುತ್ತದೆ. ಇದಕ್ಕಾಗಿ ದಲಿತರು ಒಗ್ಗಟ್ಟಾಗಬೇಕು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವಾಗಬೇಕು ಎಂದರು.

ಲೇಖಕಿ ಮಾಧವಿ ಭಂಡಾರಿ ಕೆರೆಕೋಣ ಉಪನ್ಯಾಸ ನೀಡಿದರು. ಸೂಲಗಿತ್ತಿ ಕೆರಿಯಮ್ಮ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಂಚಾಲಕ ಸುಭಾಷ್ ಕಾನಡೆ, ಗ್ರಾಪಂ ಮಾಜಿ ಸದಸ್ಯ ಮೋಹನ್ ಕಾನಡೆ, ಕೆರಿಯಮ್ಮ ಗಂಜಪ್ಪ, ಚಂದ್ರಪ್ಪ ಎಸ್. ಸಾಗರ್‌ಕರ್, ಪರಮೇಶ್ವರ, ನಂದನ್ ಬೋರ್ಕರ್, ಎಚ್.ಬಂಗಾರಪ್ಪ, ಪಿ.ವಿ.ಯಂಕಪ್ಪ, ಕೇಶವ ಕಾನಡೆ, ಪ್ರಶಾಂತ್ ನಾಯ್ಕ, ನಾಗರಾಜ ಶಿರಸಿಕರ್, ಸುಮತಿ, ಶಾರದಾ ವಾಸುದೇವ ಇತರರಿದ್ದರು.