ಸೊರಬ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಈಡಿಗ ಸಮುದಾಯ ಭವನವನ್ನು ಅಭದ್ರಗೊಳಿಸುತ್ತಿರುವ ತಾಲೂಕು ಈಡಿಗ ಸಂಘದ ಸಮಿತಿಯ ಕ್ರಮ ಸರಿಯಲ್ಲ. ಈ ಹಿಂದಿನ ಯೋಜನೆಯಂತೆ ನಿರ್ಮಾಣವಾಗಬೇಕು ಎಂದು ತಾಲೂಕು ಆರ್ಯ ಈಡಿಗ ಸಂಘದ ಮಾಜಿ ಅಧ್ಯಕ್ಷ ಕೆ.ಅಜ್ಜಪ್ಪ ಆಗ್ರಹಿಸಿದರು.
2022ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಅಂದಿನ ಸಮಿತಿ ತೀರ್ಮಾನದಂತೆ ಕಟ್ಟಡ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಿ 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದಕ್ಕನುಗುಣವಾಗಿ ಅಂದಿನ ಶಾಸಕ ಕುಮಾರ್ ಬಂಗಾರಪ್ಪ ಅವರು 1.5 ಕೋಟಿ ಅನುದಾನ ತಂದಿದ್ದರು. ಯಾರ ಗಮನಕ್ಕೂ ತಾರದೆ, ಚರ್ಚಿಸದೆ ಈಗಿನ ಸಮಿತಿಯವರು ಭವನದ ಕಟ್ಟಡದ ಕಂಬಗಳನ್ನು ಕೆಡುವುತ್ತಿದ್ದಾರೆ. ಈಗಾಗಲೇ ಭವನಕ್ಕೆ ಈಡಿಗ ಸಮಾಜದ ಅನೇಕ ಮಹನೀಯರ ಸಹಾಯಹಸ್ತ ದೊರೆತಿದೆ. ಕಟ್ಟಡದ ವಿನ್ಯಾಸ ಬದಲಾವಣೆ ಮಾಡಲು ಹೊರಟಿರುವುದು ಹಣ ಅಪವ್ಯಯ ಆದಂತಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಹಿಂದಿನ ನೀಲಿನಕ್ಷೆಯಂತೆಯೇ ಭವನ ನಿರ್ಮಾಣವಾಗಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಇದಕ್ಕೆ ಹಣದ ಕೊರತೆ ಇದೆ ಎಂದು ಇರುವ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಪ್ರತಿ ಮನೆ-ಮನೆಗೆ ತೆರಳಿ ಹಣ ಕ್ರೋಡೀಕರಿಸುವುದು ಕಷ್ಟದ ಕೆಲಸವಲ್ಲ. ಈಗಾಗಲೇ ಮುಟುಗುಪ್ಪೆ ಗ್ರಾಮದ ಉದ್ಯಮಿ ಎಂ.ಕೃಷ್ಣಪ್ಪ 12 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ ಈ ಹಿಂದೆ ನಿವೇಶನವನ್ನು ನೋಂದಾಯಿಸಿಕೊಳ್ಳಲು ಕೆಲವು ಮಹನೀಯರು ಧನ ಸಹಾಯ ಮಾಡಿದ್ದಾರೆ. ಹೀಗಿರುವಾಗ ಅವರ ಆಶಯಗಳಿಗೆ ಧಕ್ಕೆ ಬಾರದಂತೆ ಯಥಾಸ್ಥಿತಿ ಕಾಪಾಡಿಕೊಂಡು ಭವನ ನಿರ್ಮಿಸಲಿ ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಟಿ.ಪುಂಡಲೀಕ, ಟಿ.ರಾಮಚಂದ್ರ, ಪರಶುರಾಮ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.