ನ್ಯೂಸ್

ಕೆರೆ, ಕಾಲುವೆ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ವಲಯ

ಬೆಂಗಳೂರು: ದೇಶದಲ್ಲಿ ಪ್ರಥಮ ಬಾರಿಗೆ ಜಲಮೂಲ/ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಬಫರ್ ಗಡಿ ಗುರುತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದಾಗಿ ಹಲವು ದಿನಗಳಿಂದ ಉಂಟಾಗಿದ್ದ ಬರ್ ರೆನ್ ಗೊಂದಲಕ್ಕೆ ಪರಿಹಾರ ಸಿಗುವಂತಾಗಿದೆ.

ಜಲಾಶಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಬಫರ್ ವಲಯ ನಿಗದಿಪಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಜಲಮೂಲ/ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ವೈಜ್ಞಾನಿವಾಗಿ ಬಫರ್ ಝೋನ್ ನಿಯಮಾವಳಿಗಳ ತಿದ್ದುಪಡಿಗೆ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ(ಕೆಟಿಸಿಡಿಎ) ಪ್ರಸ್ತಾವನೆ ಸಲ್ಲಿಸಿದೆ. ಇದು ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಿ ಒಪ್ಪಿಗೆ ಪಡೆಯಲು ಸಣ್ಣ ನೀರಾವಳಿ ಇಲಾಖೆ ಸಿದ್ದತೆ ನಡೆಸಿದೆ.

ಬಫರ್ ಅಂತರವನ್ನು ರೂಪಿಸುವಾಗ ವೈಜ್ಞಾನಿಕ ದೃಷ್ಟಿಕೋನ ಪಾಲಿಸಲಾಗಿದೆ. ಕೆರೆ ಬಫರ್ ಎಂದರೆ ಕೆರೆ ಸುತ್ತಲಿನ ಪ್ರದೇಶವು ಮಳೆ ನೀರನ್ನು ಕೆರೆಗೆ ಹರಿಯಲು ಅನುಕೂಲವಾಗುವಂತೆ ಮಾಡುವುದು. ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ ಬಫರ್ ಝೋನ್ ಪ್ರದೇಶವು ಕೆರೆಯ ಗಾತ್ರಕ್ಕಿಂತ ಹೆಚ್ಚಿತ್ತು. ಮೊದಲು ಕೆರೆಗಳ ಮೇಲೆ ಕಲ್ಲು ಜೋಡಿಸಿ ಮತ್ತು ಜನರ ಓಡಾಟಕ್ಕೆ ರಸ್ತೆಯಾಗಿ ಬಳಸುತ್ತಿದ್ದರು. ಹೀಗಾಗಿ, ಕೆರೆಗಳ ಗಾತ್ರದ ಆಧಾರದ ಮೇಲೆ ಬಫರ್ ವಲಯ ನಿಗದಿಪಡಿಸಲಾಗಿದೆ. ಕೆರೆ ವಿಸ್ತೀರ್ಣ ಕಡಿಮೆ ಇದ್ದರೇ ಕಡಿಮೆ ಬಫರ್, ವಿಸ್ತೀರ್ಣ ಹೆಚ್ಚಿದ್ದರೆ ಹೆಚ್ಚಿನ ಬಫರ್ ಝೋನ್ ಗಡಿ ಗುರುತು ಮಾಡಲಾಗಿದೆ.

ಅದೇ ರೀತಿಯಾಗಿ ಕಾಲುವೆ ಬಫರ್‌ಗಳ ವಿಷಯದಲ್ಲಿ ಪ್ರಸ್ತುತ 30 ಮೀ (ಪ್ರಾಥಮಿಕ ಕಾಲುವೆ), 15 ಮೀ (ದ್ವಿತೀಯ ಕಾಲುವೆ), 10 ಮೀ (ತೃತೀಯ ಕಾಲುವೆ) ಅವೈಜ್ಞಾನಿಕವಾಗಿದೆ. ಅನೇಕ ಕಾಲುವೆಯ ಅಗಲವೇ ಬಫರ್‌ಗಿಂತ ಕಡಿಮೆಯಾಗಿದೆ. ಆದ್ದರಿಂದ, ಪರಿಶೀಲನೆಯ ನಂತರ, ಹೊಸ ಕಾಲುವೆ ಬಫರ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಟಿಸಿಡಿಎ ಮಾಹಿತಿ ನೀಡಿದೆ.

ಬರ್ ವಲಯ ಪ್ರಸ್ತಾವನೆ:

- 5 ಗುಂಟೆವರೆಗೆ 0 ಮೀಟರ್

- 5 ಗುಂಟೆಯಿಂದ 1 ಎಕರೆ ವರೆಗೆ 3 ಮೀಟರ್

- 1 ರಿಂದ 10 ಎಕರೆವರೆಗೆ 6 ಮೀಟರ್

- 10 ರಿಂದ 25 ಎಕರೆವರೆಗೆ 12 ಮೀಟರ್

- 25 ರಿಂದ 100 ಎಕರೆವರೆಗೆ 24 ಮೀಟರ್

- 100 ಎಕರೆಗಿಂತ ದೊಡ್ಡದಾದ ಕೆರೆಗಳಿಗೆ 30 ಮೀಟರ್

ಕಾಲುವೆಗಳಿಗೆ ಬಫರ್ ಗಡಿ :

- ಪ್ರಾಥಮಿಕ ಕಾಲುವೆ 15 ಮೀ

- ದ್ವಿತೀಯ ಕಾಲುವೆ 10 ಮೀ

- ತೃತೀಯ ಕಾಲುವೆ 5 ಮೀ.

ಇತರ ರಾಜ್ಯದಲ್ಲಿ ನಿಯಮ ಏನಿದೆ?

ಗುಜರಾತ್‌ನಲ್ಲಿ ಜಲಮೂಲಗಳ ಪ್ರದೇಶದಿಂದ 9 ಮೀಟರ್, ತೆಲಂಗಾಣದಲ್ಲಿ 10 ಹೆಕ್ಟೇರ್‌ಗಿಂತ ದೊಡ್ಡದಾದ ಕೆರೆಗೆ 30 ಮೀಟರ್ ಮತ್ತು 9 ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ಕೆರೆಗೆ 9 ಮೀಟರ್ ನಿಗದಿಪಡಿಸಲಾಗಿದೆ. ತಮಿಳುನಾಡಿನಲ್ಲಿ ಕೆರೆಗಳ ಅಂಚಿನಿಂದ 3 ಮೀ ಬಫರ್ ಝೋನ್ ಏಕರೂಪ ಅನುಸರಿಸಲಾಗಿದೆ.

ಪ್ರಸ್ತಾಪಿತ ತಿದ್ದುಪಡಿಯ ಲಾಭಗಳು

-ಕೆರೆಯ ಸಾಮರ್ಥ್ಯ ಕುಗ್ಗಿಸದೆ ನೀರಿನ ಹರಿವಿಗೆ ಅಡ್ಡಿಪಡಿಸದಂತಹ ಗಡಿ ಗುರುತು

-ಕೆರೆ ಬಫರ್ ಝೋನ್ ಖಾಸಗಿ ಭೂಮಿಯಾಗಿದ್ದು, ನಿರ್ಮಾಣ ನಿಷೇಧ ವಲಯ ಎಂದು ೋಷಣೆ

-ಮೂಲಸೌಕರ್ಯ ಅಭಿವೃದ್ಧಿಯಿಂದ ನಗರದಲ್ಲಿ ಪ್ರವಾಹ ಅಪಾಯ ತಡೆಯಲು ಅನುಕೂಲ

-ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಲಾಭವಲ್ಲ, ಕೆರೆಯ ಗಾತ್ರಕ್ಕೆ ಅನುಗುಣವಾಗಿ ನಿಗದಿ

-ಜಲಮೂಲಗಳ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುವುದಿಲ್ಲ

-ನಗರಗಳಿಗೆ ಮೂಲಸೌಕರ್ಯ ಒದಗಿಸಲು ಸಹಾಯ

-ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಲು ಎಸ್‌ಟಿಪಿಗಳ ನಿರ್ಮಾಣಕ್ಕೆ ಅನುಕೂಲ

-ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನ

-ಬಫರ್ ವಲಯದಲ್ಲಿ ನೀರು, ಒಳಚರಂಡಿ, ವಿದ್ಯುತ್ ಅಭಿವೃದ್ಧಿಪಡಿಸಲು ಸಾಧ್ಯ

ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ವೈಜ್ಞಾನಿಕವಾಗಿ ಕೆರೆ ಮತ್ತು ಕಾಲುವೆ ಗಾತ್ರಕ್ಕೆ ಅನುಕೂವಾಗಿ ಬರ್ ವಲಯ ಗಡಿ ಗುರುತು ಮಾಡಲು ಸರ್ಕಾರ ನಿರ್ಧರಿಸಿದೆ.

ಎನ್.ಎಸ್. ಬೋಸರಾಜು-ಸಣ್ಣ ನೀರಾವರಿ ಸಚಿವ