ಜೈಪುರ: ರಾಜಸ್ಥಾನದ ಪುಷ್ಕರ್ನಲ್ಲಿ ವಾರ್ಷಿಕ ಜಾನುವಾರು ಜಾತ್ರೆ ನಡೆಯುತ್ತಿದ್ದು ಸಾವಿರಾರು ಜಾನುವಾರುಗಳು ಆಗಮಿಸಿದ್ದು, 23 ಕೋಟಿ ರೂ. ಮೌಲ್ಯದ ಎಮ್ಮೆ ಮತ್ತು 15 ಕೋಟಿ ರೂ. ಮೌಲ್ಯದ ಕುದುರೆ ಜನಾಕರ್ಷಣೆಯ ಕೇಂದ್ರಬಿಂದುವಾಗಿವೆ.
ರಾಜಸ್ಥಾನದ ಪಶುಸಂಗೋಪನೆಯ ಸಂಪ್ರದಾಯದ ಭಾಗವಾಗಿ ಪ್ರತಿ ವರ್ಷ ಪುಷ್ಕರ್ನಲ್ಲಿ ಜಾನುವಾರು ಜಾತ್ರೆ ಆಯೋಜಿಸಲಾಗುತ್ತದೆ. ಇಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಹಸುಗಳು, ಅತ್ಯುತ್ತಮ ಕುದುರೆ ತಳಿಗಳು, ಆಕರ್ಷಕ ಒಂಟೆಗಳು ಭಾಗವಹಿಸುತ್ತವೆ. ಸಾಂಪ್ರದಾಯಿಕ ನಾಗೌರ್ ಕೋಣ ಸ್ಪರ್ಧೆಯೂ ಈ ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ವರ್ಷ ಅ. 23ರಂದು ಜಾತ್ರೆ ಆರಂಭವಾಗಿದ್ದು, ನವೆಂಬರ್ 7 ರವರೆಗೆ ನಡೆಯಲಿದೆ. ಇದುವರೆಗೆ ಜಾನುವಾರು ಜಾತ್ರೆಗೆ 3028 ಕುದುರೆಗಳು, 1306 ಒಂಟೆಗಳು ಸೇರಿದಂತೆ 4300 ಕ್ಕೂ ಹೆಚ್ಚು ಜಾನುವಾರುಗಳ ನೋಂದಣೆ ಮಾಡಲಾಗಿದೆ.
11 ಕೋಟಿ ರೂ. ಬೆಲೆಯ ಚಾಂಪಿಯನ್ ಕುದುರೆ: ಪುಷ್ಕರ್ ಮೇಳದಲ್ಲಿ ಮೂರನೇ ಬಾರಿಗೆ ಭಾಗವಹಿಸಿರುವ ಬಾದಲ್ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಕುದುರೆ ಈಗಾಗಲೇ 285 ಕೋಲ್ಸ್ಗಳಿಗೆ ತಂದೆಯಾಗಿದ್ದು, ಹಲವರು ಈ ಕುದುರೆ ಖರೀದಿಗೆ 11 ಕೋಟಿ ರೂ.ವರೆಗೆ ನೀಡಲು ಮುಂದೆ ಬಂದಿದ್ದಾರೆ, ಆದರೆ ನಾವು ಮಾರಾಟ ಮಾಡುವುದಿಲ್ಲ ಎಂದು ತಿಳಿಸಿರುವುದಾಗಿ ಕುದುರೆ ಮಾಲೀಕರು ತಿಳಿಸಿದ್ದಾರೆ.
25 ಲಕ್ಷ ರೂ. ಮೌಲ್ಯದ ಎಮ್ಮೆ: ಮಧ್ಯಪ್ರದೇಶದ ಉಜ್ಜಯಿನಿಯ ರಾಣಾ ಎಂಬ ಎಮ್ಮೆ ಜಾನುವಾರು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಇದು 600 ಕೆ.ಜಿ. ತೂಕವಿದ್ದು, 8 ಅಡಿ ಉದ್ದ ಮತ್ತು 5.5 ಅಡಿ ಎತ್ತರವಿದೆ. ಮೂರೂವರೆ ವರ್ಷ ಪ್ರಾಯದ ಈ ಎಮ್ಮೆಗೆ ಪ್ರತಿ ದಿನ ಕಡಲೆ ಹಿಟ್ಟು, ಮೊಟ್ಟೆ, ಎಣ್ಣೆ, ಹಾಲು, ತುಪ್ಪ ಮತ್ತು ಲಿವರ್ ಟಾನಿಕ್ ಸೇರಿ 1500 ರೂ. ಮೌಲ್ಯದ ಆಹಾರ ಕೊಡುತ್ತಿದ್ದೇವೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಅನ್ಮೋಲ್ ಎಂಬ ಎಮ್ಮೆ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಈ ಎಮ್ಮೆಯ ಮೌಲ್ಯ -ಠಿ;23 ಕೋಟಿ ರೂ ಇದ್ದು, ಪ್ರತಿ ದಿನ ಇದಕ್ಕೆ ಹಾಲು, ದೇಸಿ ತುಪ್ಪ, ಒಣ ಹಣ್ಣುಗಳು ಸೇರಿದಂತೆ ವಿಶೇಷ ಆಹಾರವನ್ನು ಮಾತ್ರ ಕೊಡಲಾಗುತ್ತಿದೆ. 1500 ಕೆ.ಜಿ. ತೂಕ ಇದ್ದು, ವಿಶೇಷ ಕಾಳಜಿಯಿಂದ ಆರೈಕೆ ಮಾಡಲಾಗುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಚಂಡೀಗಢದ ಗ್ಯಾರಿ ಗಿಲ್ ಒಡೆತನದ ಶಹಬಾಜ್ ಕುದುರೆ ಜನರನ್ನು ಸೆಳೆಯುತ್ತಿದೆ. ಎರಡೂವರೆ ವರ್ಷದ ಶಹಬಾಜ್, ಪ್ರತಿಷ್ಠಿತ ಮಾರ್ವಾರಿ ತಳಿಯ ಕುದುರೆಯಾಗಿದ್ದು, ಹಲವು ಬಹುಮಾನಗಳನ್ನು ಪಡೆದಿದೆ. ಈ ಕುದುರೆಯಿಂದ ಸಂತಾನೋತ್ಪತ್ತಿ ಮಾಡಿಸಲು 2 ಲಕ್ಷ ರೂ. ಶುಲ್ಕ ವಿಧಿಸಲಾಗುತ್ತದೆ. ಇದರ ಬೆಲೆ 15 ಕೋಟಿ ರೂ. ಇದ್ದು, 9 ಕೋಟಿಯವರೆಗೆ ಆಫರ್ ಬಂದಿದೆ ಎಂದು ಗಿಲ್ ತಿಳಿಸಿದ್ದಾರೆ.