ನ್ಯೂಸ್

ಬಜೆಟ್ ಅಧಿವೇಶನದೊಳಗೆ ಸಮಸ್ಯೆ ಪರಿಹಾರಕ್ಕೆ ಯತ್ನ

Shivamogga

ಶಿವಮೊಗ್ಗ: ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಎನ್‌ಪಿಎಸ್(ಹೊಸ ಪಿಂಚಣಿ ಯೋಜನೆ) ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಎಂಎಲ್‌ಸಿ ಆಯನೂರು ಮಂಜುನಾಥ್ ಭರವಸೆ ನೀಡಿದರು.

ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎನ್‌ಪಿಎಸ್ ನೌಕರರ ಸಮಾವೇಶ, ವೊಟ್ ಫಾರ್ ಒಪಿಎಸ್(ಹಳೇ ಪಿಂಚಣಿ ಯೋಜನೆ) ಅಭಿಯಾನ ಹಾಗೂ ರಾಜ್ಯ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದ ಅವರು, ಎನ್‌ಪಿಎಸ್ ಎಲ್ಲ ಹಂತಗಳಲ್ಲಿದ್ದು ಲಕ್ಷಾಂತರ ಕುಟುಂಬಗಳ ಬದುಕಿನ ಪ್ರಶ್ನೆ ಕಾಡುತ್ತಿದೆ ಎಂದರು.

ನ್ಯಾಯಕ್ಕಾಗಿ ಹೋರಾಟ ಮಾಡುವವರ ಮೇಲೆ ದಬ್ಬಾಳಿಕೆ ನಡೆಯುವುದು ಸಹಜ. ಸಮಾಜಕ್ಕೆ ಅನ್ಯಾಯ ಮಾಡುವವರಿಗೆ ಯಾರೂ ತೊಂದರೆ ಕೊಡುವುದಿಲ್ಲ. ದುಡಿದು ತಿನ್ನುವವರಿಗೆ ಬೆಂಬಲ ಕೊಡಬೇಕೇ ವಿನಃ ಹೊಡೆದು ತಿನ್ನುವವರಿಗಲ್ಲ. ನ್ಯಾಯಬದ್ಧ ನಿಲುವಿನಲ್ಲಿ ಎನ್‌ಪಿಎಸ್ ನೌಕರರ ಹೋರಾಟಕ್ಕೆ ಬೆಂಬಲಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ರಾಘವೇಂದ್ರ ಪ್ರಸ್ತಾವಿಕ ಮಾತನಾಡಿದರು. ಒಪಿಎಸ್ ಜಾರಿಗೆ ಆಗ್ರಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ನೌಕರರು ಬೈಕ್ ಜಾಥಾ ನಡೆಸಿದರು. ಮಾಜಿ ಶಾಸಕಿ ಶಾರದಾ ಪೂರ‌್ಯಾನಾಯ್ಕ, ಸಂಘದ ರಾಜ್ಯಾಧ್ಯಕ್ಷ ಶಾಂತರಾಮ, ಪ್ರಧಾನ ಕಾರ್ಯದರ್ಶಿ ನಾಗನಗೌಡ, ಹಿರಿಯ ಉಪಾಧ್ಯಕ್ಷ ಚಂದ್ರಕಾಂತ ತಲವಾರ, ಸಿದ್ದಪ್ಪ ಸಂಗಣ್ಣ, ಕೋಶಾಧ್ಯಕ್ಷ ಕೇಶವ ಪ್ರಸಾದ್, ಮುಖಂಡರಾದ ಪ್ರಭಾಕರ್, ಎಲ್.ದಯಾನಂದ್, ಮಹಾಬಲೇಶ್ವರ ಹೆಗಡೆ, ರಾಧಾ, ಶಶಿಕಲಾ, ರವಿ ಅಸೂಟಿ, ಮಹಾದೇವ ಶರ್ಮ, ಸುರೇಶ್, ಚಂದ್ರನಾಯ್ಕ ಉಪಸ್ಥಿತರಿದ್ದರು.