ನ್ಯೂಸ್

ಜನವರಿ 31ರಿಂದ ಬಜೆಟ್ ಅಧಿವೇಶನ: ಮಹಿಳಾ ರೈತರಿಗೆ ದೊಡ್ಡ ಘೋಷಣೆ ಸಾಧ್ಯತೆ

ನವದೆಹಲಿ: ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನಕ್ಕೆ ಸಂಸತ್ತು ಸಜ್ಜಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರಂಭಿಕ ದಿನದಂದು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಅಧಿವೇಶನದಲ್ಲಿ ಪೂರ್ಣ ಪ್ರಮಾಣದ ಬಜೆಟ್​ ಮಂಡಿಲಾಗುವುದಿಲ್ಲ. ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳ ನಡೆಯಲಿರುವುದರಿಂದ ಅಲ್ಲಿಯವರೆಗಿನ ಅವಧಿಯ ಮಧ್ಯಂತರ ಬಜೆಟ್​ ಇದಾಗಿರುತ್ತದೆ. ಹೀಗಾಗಿ, ಯಾವುದೇ ಪ್ರಮುಖ ನಿರ್ಣಯಗಳು ಈ ಬಜೆಟ್​ನಲ್ಲಿ ಇರುವ ಸಾಧ್ಯತೆ ಕಡಿಮೆ. ಆದರೂ ಒಂದು ಸಂಭಾವ್ಯ ಪ್ರಮುಖ ನಿರ್ಧಾರವೆಂದರೆ, ಮಹಿಳಾ ರೈತರಿಗೆ ನೀಡಲಾಗುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದುಪ್ಪಟ್ಟು ಮಾಡಬಹುದಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈಗ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಹಣ ನೀಡಲಾಗುತ್ತಿದೆ. ಭೂಮಾಲೀಕ ಮಹಿಳಾ ರೈತರಿಗೆ ಈ ವಾರ್ಷಿಕ ಪಾವತಿಯನ್ನು 12,000 ರೂ.ಗೆ ದುಪ್ಪಟ್ಟು ಮಾಡುವುದನ್ನು ಸರ್ಕಾರ ಪರಿಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯನ್ನು ಫೆಬ್ರವರಿ 1 ರಂದು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಇದಕ್ಕಾಗಿ ಸರ್ಕಾರಕ್ಕೆ ಹೆಚ್ಚುವರಿಯಾಗಿ 12,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದರೆ, ಮುಂಬರುವ ಲೋಕಸಭೆ ಚುನಾವಣೆ 2024 ಕ್ಕೆ ಮುಂಚಿತವಾಗಿ ಮಹಿಳಾ ಕೃಷಿ ಕಾರ್ಮಿಕರನ್ನು ಸಬಲೀಕರಣಗೊಳಿಸುವ ಒಂದು ಪ್ರಮುಖ ಕ್ರಮವಾಗಲಿದೆ.

ಇತರ ವಿಷಯಗಳ ಜೊತೆಗೆ, 2047 ರ ವೇಳೆಗೆ ಭಾರತವು 30 ಲಕ್ಷ ಕೋಟಿ ಡಾಲರ್​ ಆರ್ಥಿಕತೆಯಾಗಲು ಆಶಿಸುತ್ತಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಸರ್ಕಾರವು ತನ್ನ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಮುಂಬರುವ ಮಧ್ಯಂತರ ಬಜೆಟ್‌ನಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಅಸಂಭವವಾದರೂ, ಸಣ್ಣ ಬದಲಾವಣೆಗಳನ್ನು ತಳ್ಳಿಹಾಕಲಾಗುವುದಿಲ್ಲ.