ಸರಗೂರು: ದುರ್ಬಲ ವರ್ಗದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಮಂಗಳವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶವಸಂಸ್ಕಾರಕ್ಕೆ 5 ಸಾವಿರ ರೂ. ನೀಡಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಕಾನೂನಿನಲ್ಲಿ ಅವಕಾಶವಿರುದ್ಧ ಸಾರ್ವಜನಿಕರಿಗೆ ಹಿತದೃಷ್ಟಿಯಿಂದ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ನಾಯಿ ಕಡಿತಕ್ಕೆ ಒಳಗಾದವರಿಗೆ ಐದು ಸಾವಿರ ರೂ. ಪರಿಹಾರ ನೀಡಲು ಕಳೆದ ಸಭೆಯಲ್ಲಿ ಸರ್ವಸದಸ್ಯರು ಚರ್ಚೆ ಮಾಡಿ, ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕಡುಬಡವರಿಗೆ ಈ ಸೌಲಭ್ಯ ಸಿಗಲಿದೆ. ನಾಯಿ ಕಡಿತಕ್ಕೆ ಒಳಪಟ್ಟು ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಈಗಾಗಲೇ ಪಪಂ ವತಿಯಿಂದ 8 ಸಾವಿರ ರೂ. ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಹಲವರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯದವರಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಮೂರು ಲಕ್ಷ ರೂ. ಅನುದಾನವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಜತೆಗೆ 2023-24ನೇ ಸಾಲಿನ ಹಣವನ್ನು ವಿದ್ಯಾರ್ಥಿಗಳಿಗೆ ಆಯಾ ವಾರ್ಡಿನ ಸದಸ್ಯರಿಂದ ಪಟ್ಟಿ ಮಾಡಿಸಿಕೊಂಡು, ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗಿದೆ. ಬಿಎ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಜತೆಗೆ ಪೌರಕಾರ್ಮಿಕರ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಎಂದು ಹೇಳಿದರು.
ಮುಖಂಡ ವೆಂಕಟಪ್ಪ ಮಾತನಾಡಿ, ಸಂತೇಮಾಳದಲ್ಲಿ ಇರುವ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಟೆಂಡರ್ ಕರೆಯಬೇಕು, ವಿದ್ಯಾರ್ಥಿಗಳಿಗೆ ಸಹಾಯಧನ, ಸಂತೆ ಸುಂಕ ಹರಾಜು ಹಾಕಬೇಕು, ನಿಗದಿತ ಯೋಜನೆಗೆಳಿಗೆ ಮೀಸಲಾದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಇದು ನಿಲ್ಲಬೇಕು. ಜಯಂತಿಗಳಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಸರಗೂರು ಕೃಷ್ಣ ಮಾತನಾಡಿ, ರಸ್ತೆ ಅಭಿವೃದ್ಧಿ, ವಿವಿಧ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿಲ್ಲ. ಹೀಗಾಗಿ ತಾಲೂಕಿನ ಜನರು ಸಂಕಷ್ಟ ಅನುಭವಿಸುತ್ತಿದ್ದು, ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮ, ಸದಸ್ಯೆ ಸಣ್ಣತಾಯಮ್ಮ, ನೂರಾಳಸ್ವಾಮಿ, ಚಲುವಕೃಷ್ಣ, ಚೈತ್ರಾ ಸ್ವಾಮಿ, ಮುಖಂಡರಾದ ರಾಮು ಬಜರಂಗಿ, ಪುಟ್ಟಹನುಮಯ್ಯ, ಪಳನಿಸ್ವಾಮಿ, ದಿನೇಶ್, ರಾಮು, ಆನಿತಕುಮಾರಿ ಇತರರು ಭಾಗವಹಿಸಿದ್ದರು.