ನ್ಯೂಸ್

ಬಾರದ ಜಿಎಸ್​ಟಿ ಪಾಲು: ಬಜೆಟ್​ಗೆ ಸಿಎಂ ಬಿಎಸ್​ವೈ ಸರ್ಕಸ್, ಅಗ್ಗದ ಯೋಜನೆಗಳಿಗೆ ಬ್ರೇಕ್

ಬೆಂಗಳೂರು: ಈ ಬಾರಿಯ ಬಜೆಟ್ ಮೇಲೆ ಜನರು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಹೆಚ್ಚು ಘೋಷಣೆಗೂ ಅವಕಾಶಗಳಿಲ್ಲ!

ಅಗ್ಗದ ಮತ್ತು ಜನಪ್ರಿಯ ಯೋಜನೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಾರಿ ಕಳೆದ ವರ್ಷದ ಬಜೆಟ್ ಗಾತ್ರವನ್ನು ಉಳಿಸಿಕೊಳ್ಳುವುದೇ ಕಡು ಕಷ್ಟವಾಗಿದೆ.

ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಗಾತ್ರ 2.14 ಲಕ್ಷ ಕೋಟಿ ರೂ. ಆಗಿತ್ತು. ಜಿಎಸ್​ಟಿ, ನೋಟು ಅಮಾನ್ಯೀಕರಣ, ಬಳಿಕ ಆರ್ಥಿಕ ವ್ಯವಸ್ಥೆ ವ್ಯತಿರಿಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ಗಾತ್ರ 2 ಲಕ್ಷ ಕೋಟಿ ರೂ. ದಾಟುವುದೇ ಅನುಮಾನ ಎಂಬ ಸ್ಥಿತಿ ಉಂಟಾಗಿದೆ.

ತೆರಿಗೆ ಸಂಗ್ರಹ ಮತ್ತು ಆದಾಯ ಗಳಿಕೆಯಲ್ಲಿ ಕೊರತೆ ಎದುರಿಸುತ್ತಿರುವ ಸರ್ಕಾರಕ್ಕೆ ಜಿಎಸ್​ಟಿ ಆಘಾತ ಮಾರಕವಾಗಿ ಪರಿಣಮಿಸಿದೆ. ಅಂದಾಜಿನ ಪ್ರಕಾರ 22ರಿಂದ 25 ಸಾವಿರ ಕೋಟಿ ರೂ. ಕೊರತೆ ಉಂಟಾಗುವ ಸಾಧ್ಯತೆ ನಿಚ್ಚಳವಾಗಿರುವ ಕಾರಣ ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಕಡಿಮೆಯಾಗಲಿದೆ ಎಂದು ಹಣಕಾಸು ಇಲಾಖೆ ಅಂದಾಜಿಸಿದೆ.

ಜಿಎಸ್​ಟಿ ಸಂಗ್ರಹದಲ್ಲಿ ರಾಜ್ಯದ ಪಾಲು 17 ಸಾವಿರ ಕೋಟಿ ರೂ.ಗಳಾಗಿದ್ದು, 6 ಸಾವಿರ ಕೋಟಿ ರೂ. ಬರುವುದು ಬಾಕಿ ಇದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಆಗಿಂದಾಗ್ಗೆ ಪತ್ರ ರವಾನಿಸಿ, ಮಾರ್ಚ್ ಒಳಗೆ ಬರುವ ನಿರೀಕ್ಷೆಯಲ್ಲಿ ಕಾಯ್ದು ಕುಳಿತಿದೆ.

ತೆರಿಗೆ ಸಂಗ್ರಹದಲ್ಲೂ ಈ ಬಾರಿ ರಾಜ್ಯ ಸಾಕಷ್ಟು ಹಿನ್ನಡೆ ಕಂಡಿದೆ. ಫೆಬ್ರವರಿ ಕಳೆಯುತ್ತಾ ಬಂದರೂ ತೆರಿಗೆ ಸಂಗ್ರಹದಲ್ಲಿ 10,500 ಕೋಟಿ ರೂ ಹಿನ್ನಡೆಯಾಗಿದೆ. ಮಾರ್ಚ್ ಹೊತ್ತಿಗೆ ತೆರಿಗೆ ಸಂಗ್ರಹ ಗಣನೀಯವಾಗಿ ಏರಿಕೆ ಆಗಬಲ್ಲದು ಎನ್ನುವ ನಿರೀಕ್ಷೆ ಇದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಫಲಪ್ರದವಾಗುವ ಲಕ್ಷಣಗಳಿಲ್ಲ.

ಒಂದಿಷ್ಟು ಕಾರ್ಯಕ್ರಮ: ರೈತಾಪಿ ವಲಯಕ್ಕೆ ಅನುಕೂಲವಾಗುವಂತೆ ಕೆಲವೇ ಕಾರ್ಯಕ್ರಮಗಳನ್ನು ಘೋಷಿಸಿ ಇನ್ನುಳಿದ ಎಲ್ಲ ಅಗ್ಗದ ಮತ್ತು ಓಟಿನ ರಾಜಕಾರಣಕ್ಕೆ ಒತ್ತು ನೀಡುವ ಯೋಜನೆಗಳಿಗೆ ಕಡಿವಾಣ ಹಾಕಲು ಸಿಎಂ ಮುಂದಾಗಿದ್ದಾರೆ. ಕುಮಾರಸ್ವಾಮಿ ಸರ್ಕಾರದಲ್ಲಿ ಸಾಲ ಮನ್ನಾ ಯೋಜನೆಗೆ 46 ಸಾವಿರ ಕೋಟಿ ರೂ. ಘೋಷಣೆ ಮಾಡಿದ ಕಾರಣ ಬಜೆಟ್​ನಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡುವುದು ಕಷ್ಟವಾಯಿತು ಎಂಬುದು ಸಿಎಂಗೆ ಸ್ಪಷ್ಟವಾಗಿ ಗೊತ್ತಿದೆ.

ಕಠಿಣ ಕ್ರಮಕ್ಕೆ ಸಲಹೆ: ಹಣಕಾಸು ಮುಗ್ಗಟ್ಟು ಎದುರಾಗಿರುವ ಕಾರಣ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ, ಮುಂದೆ ಇನ್ನೂ ಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೇರವಾಗಿ ಹೇಳಿದ್ದಾರೆ. ವಾಸ್ತವ ಸ್ಥಿತಿ ಗೊತ್ತಿರುವ ಕಾರಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಇರುವ ಇತಿಮಿತಿಯೊಳಗೆ ಕೆಲವು ಕಾರ್ಯಕ್ರಮಗಳನ್ನು ಮಾತ್ರವೇ ಘೋಷಣೆ ಮಾಡಲು ಮುಂದಾಗಿದ್ದಾರೆ.

ಕುಸಿದ ರಾಜಸ್ವ ಸಂಗ್ರಹ: 22,950 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ ಗುರಿ ಹೊಂದಿದ್ದರೂ, ಇದುವರೆಗೆ ಸಂಗ್ರಹವಾಗಿರುವುದು 16,187 ಕೋಟಿ ರೂ. ಮಾತ್ರ. ಸಾರಿಗೆ ಇಲಾಖೆಯಿಂದ 7,100 ಕೋಟಿ ತೆರಿಗೆ ಸಂಗ್ರಹ ಗುರಿ ಇದ್ದರೂ, ಈ ತನಕ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಪ್ರತಿ ವರ್ಷವೂ ಗುರಿ ಮೀರಿದ ಸಾಧನೆ ಮಾಡುತ್ತಿದ್ದ ಸಾರಿಗೆ ಇಲಾಖೆಯದ್ದೇ ಈ ಬಾರಿ ದುಸ್ಥಿತಿಯಾಗಿದೆ. 76,660 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹಿಸುವ ಗುರಿ ಇದ್ದರೂ ಅದರಲ್ಲಿ ಸಂಗ್ರಹವಾಗಿದ್ದು, 55,984 ಕೋಟಿ ರೂಪಾಯಿ ಮಾತ್ರ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 11,828 ಕೋಟಿ ರೂ. ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ಇದ್ದರೂ, ಸಂಗ್ರಹವಾಗಿದ್ದು 8,395 ಕೋಟಿ ರೂ. ಅದರಲ್ಲೂ ಗುರಿ ಮೀರಿದ ಸಾಧನೆ ಮಾಡಲು ಆಗಿಲ್ಲ.

-ಶಿವಾನಂದ ತಗಡೂರು