ನ್ಯೂಸ್

ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಬಂಧ

ಪ್ರಸಿನ್ ಕೆ.ಆರ್

ಬೈಲಕುಪ್ಪೆ: ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಬಂಧವಿದ್ದು, ಪ್ರಕೃತಿ ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಟಿಬೇಟಿಯನ್ ಧರ್ಮಗುರು ಕರ್ಮಪಾ ರಿಪುಂಚೆ ಹೇಳಿದರು.

ಬೈಲಕುಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಕಗ್ಯುನಳಂದ ಧರ್ಮಶಾಲೆಯ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಕರ್ಮಾಪ ರಿಪುಂಚೆಯವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಿಡನೆಟ್ಟು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನು ಪ್ರಕೃತಿಯ ಮೇಲೆ ಅಲಂಬಿತನಾಗಿದ್ದಾನೆ. ಬುದ್ಧನ ಅನುಯಾಯಿಗಳಾದ ಬೌದ್ಧ ಭಿಕ್ಕುಗಳು ಕೂಡ ಮರಗಳ ಮೇಲೆ ವಿಶೇಷ ಪ್ರೀತಿಯನ್ನು ಇರಿಸಿಕೊಂಡಿದ್ದೇವೆ. ಬುದ್ಧ ತಮ್ಮ ಮೊದಲ ಬೋಧನೆ ಮಾಡಿದ್ದು, ಕಾಡಿನಲ್ಲಿ ಮರದ ಕೆಳಗೆ ಹಾಗೆ ಬುದ್ಧನಿಗೆ ಜ್ಞಾನೋದಯವಾಗಿದ್ದು, ಮರದ ಅಡಿಯಲ್ಲಿಯೇ, ಅಲ್ಲದೆ ಬುದ್ಧ ಪರಿನಿರ್ವಾಣ ಹೊಂದಿದ್ದು, ಕೂಡ ಎರಡು ಮರಗಳ ಮಧ್ಯದಲ್ಲೇ, ಆದ್ದರಿಂದ ಬೌದ್ಧರಾದ ನಾವು ಪ್ರಕೃತಿಯನ್ನು ಪ್ರೀತಿಯಿಂದ ಕಾಣಬೇಕು ಎಂದರು.

ಕಗ್ಯುನಳಂದ ಧರ್ಮಶಾಲೆಯ ವತಿಯಿಂದ ಒಂದು ತಿಂಗಳೊಳಗೆ 1ಲಕ್ಷ ಗಿಡ ನೆಡುವ ಯೋಜನೆ ಹಮ್ಮಿಕೊಂಡಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ಪರಿಸರವಾದಿ ಪ್ರೊ.ರವಿಕುಮಾರ್ ಮಾತನಾಡಿ, ಸ್ಥಳೀಯರ ಸಹಕಾರದಿಂದ ಟಿಬೇಟಿಯನ್ ನಿರಾಶ್ರಿತರ ಶಿಬಿರಗಳಲ್ಲಿ ಉತ್ತಮ ವನ ನಿರ್ಮಾಣ ಸಾಧ್ಯವಾಗಿದ್ದು, ಇದು ಮಾದರಿಯಾಗಿದೆ ಎಂದರು.

ಬೌದ್ಧ ಭಿಕ್ಷುಗಳು ಧರ್ಮಗುರು ಕರ್ಮಾಪ ರಿಪುಂಚೆ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿದರು.

ಧರ್ಮಗುರು ಕರಂಬಜೆ ನೆತನ್ ಡೆಂಜಾನ್, ಗುಲುತಲ ಮೊನಾಸ್ಟ್ರೀ, ಸೆರಂಜೆ ಮೊನಾಸ್ಟ್ರಿ ತೆಲುಸೆ, ಕಾಂಗ್ರೆಸ್ ಮುಖಂಡ ಎನ್.ಎಸ್.ಭುಜಂಗ, ಕೊಪ್ಪ ಗ್ರಾಪಂ. ಸದಸ್ಯ ಸೈಯದ್ ಇಲಿಯಾಜ್, ಕೊಪ್ಪ ರವಿ, ಅಸ್ಲಾಂ ಪಾಷಾ ಇತರರು ಇದ್ದರು.