ಬೆಂಗಳೂರು: ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ಮಾರಾಟಕ್ಕೆ ಬಂದಿದ್ದ ಐವರನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನ ಕೋಂಪಲ್ಲಿ ನಿವಾಸಿ ಪಂಚಮರ್ತಿ ರಘುರಾಮ ಚೌದರಿ (45), ಹೊರಮಾವಿನ ಉದಯಕುಮಾರ್ (37), ವಿವೇಕನಗರದ ಫ್ರೆಡ್ಡಿ ಡಿಸೋಜಾ (44), ಹೆಣ್ಣೂರು ಬಂಡೆಯ ಶರಣ್ ನಾಯರ್ (41) ಹಾಗೂ ಕೊತ್ತನೂರಿನ ಎಂ.ಕೆ.ಪ್ರಸನ್ನ ಬಂಧಿತರು. 38 ಸೆ.ಮಿ. ಉದ್ದದ ಬುದ್ಧನ ವಿಗ್ರಹ ಮತ್ತು 5 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ನಗರದ ರಾಜರಾಮಮೋಹನ ರಾಯ್ ರಸ್ತೆ ವುಡ್‌ಲ್ಯಾಂಡ್ಸ್ ಹೋಟೆಲ್ ಬಳಿ ಕೆಲವರು ಅಂದಾಜು 200 ವರ್ಷದ ಬುದ್ಧನ ವಿಗ್ರಹವನ್ನು ಹೊರದೇಶಕ್ಕೆ ರಫ್ತು ಮಾಡುವ ಉದ್ದೇಶಕ್ಕೆ ವ್ಯಾಪಾರ ನಡೆಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಹೈದರಾಬಾದ್ ಮೂಲದ ಆರೋಪಿ ಪಂಚಮರ್ತಿ ರಘುರಾಮ ಚೌದರಿಗೆ ಶ್ರೀಕಾಂತ ಎಂಬಾತ ಈ ವಿಗ್ರಹವನ್ನು 30 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಈ ವಿಗ್ರಹವನ್ನು ಹೊರ ದೇಶಕ್ಕೆ ರಫ್ತು ಮಾಡಿ ಮಾರಾಟ ಮಾಡಿದರೆ ಕೋಟ್ಯಂತರ ರೂ. ಸಿಗಲಿದೆ. ಈ ಹಣವನ್ನು ಎಲ್ಲರೂ ಹಂಚಿಕೊಳ್ಳಬಹುದು ಎಂದು ಆರೋಪಿಗಳು ವಿಗ್ರಹ ಮಾರಾಟಕ್ಕೆ ಯತ್ನಿಸಿದ್ದರು.
ಹೈದರಾಬಾದ್‌ನಲ್ಲಿ ವಿಗ್ರಹ ಕಳ್ಳತನ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಪಂಚಮರ್ತಿ ರಘುಗೆ ಈ ವಿಗ್ರಹ ಮಾರಾಟ ಮಾಡಿದ್ದ ಹೈದರಾಬಾದ್ ಮೂಲದ ಶ್ರೀಕಾಂತ್ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.