ನ್ಯೂಸ್

ಈಶ್ವರ ದೇಗುಲದಲ್ಲಿ ಪೂಜೆ

ಎ. ಆರ್. ರಘುರಾಮ

ಬೆಟ್ಟದಪುರ: ಸಮೀಪದ ಅತ್ತಿಗೋಡು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ದೇಗುಲ ಆವರಣದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನದ ಅರ್ಚಕ ಅಮರಯ್ಯ ಶಾಸ್ತ್ರಿ ಹಿರೇಮಠ ನೇತೃತ್ವದಲ್ಲಿ ಮುಂಜಾನೆಯಿಂದಲೇ ದೇವಸ್ಥಾನದ ಆವರಣದಲ್ಲಿ ಪೂಜೆ, ನೈವೇದ್ಯ ಹಾಗೂ ಹೋಮಗಳು ನಡೆದವು. ವಿಶೇಷ ಪೂಜೆ ಹಿನ್ನೆಲೆಯಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಈಶ್ವರನ ಸ್ವರೂಪದ ಶಿವಲಿಂಗ ಹಾಗೂ ದೇವರ ಮೂರ್ತಿಗಳಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ಶುಭಲಗ್ನದಲ್ಲಿ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರು ಸ್ವಾಮಿಗೆ ಕೈಮುಗಿದು ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ದೇವಸ್ಥಾನ ಸಮಿತಿವತಿಯಿಂದ ಬಂದಂತಹ ಭಕ್ತರಿಗೆ ಅನ್ನದಾನ ಏರ್ಪಡಿಸಿ, ಪ್ರಸಾದ ವಿತರಣೆ ಮಾಡಲಾಯಿತು.