ಬಿಜೆಪಿ ಸಂಸದೀಯ ಮತ್ತು ಚುನಾವಣೆ ಸಮಿತಿಗೆ ನೇಮಕಗೊಂಡ ಯಡಿಯೂರಪ್ಪ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ್ ಅಭಿನಂದಿಸಿದರು. 
ನ್ಯೂಸ್

ಬಿಜೆಪಿಗೆ ಬಿಎಸ್​ವೈ ಟಾನಿಕ್: ಕೇಂದ್ರ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಸ್ಥಾನ

Webdesk - Ravikanth

| ರಾಘವ ಶರ್ಮ ನಿಡ್ಲೆ ನವದೆಹಲಿ 

ವಿಧಾನಸಭೆ ಚುನಾವಣೆ ಸನಿಹಗೊಳ್ಳುತ್ತಿರುವ ರಾಜ್ಯಗಳ ಮೇಲೆ ಕಣ್ಣಿಟ್ಟು ಪಕ್ಷದ ಉನ್ನತ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಪ್ರಾದೇಶಿಕ ಹಾಗೂ ಜಾತಿವಾರು ಪ್ರಮುಖ ನಾಯಕರಿಗೆ ಬಿಜೆಪಿ ಅವಕಾಶ ಕಲ್ಪಿಸಿದೆ.

ಕರ್ನಾಟಕದಲ್ಲಿ ಕಾರ್ಯಕರ್ತರ ಮಧ್ಯೆಯೇ ಕಳೆಗುಂದುತ್ತಿರುವ ಪಕ್ಷದ ಇಮೇಜನ್ನು ಸರಿಪಡಿಸಲು ಹಾಗೂ ಹಾಲಿ ನಾಯಕತ್ವ ಮತ್ತು ಸರ್ಕಾರದ ನಿರಾಶಾದಾಯಕ ನಿರ್ವಹಣೆಯಿಂದ ಹತಾಶೆಗೊಂಡಿರುವ ಕಾರ್ಯಕರ್ತರನ್ನು ಬಡಿದೆಬ್ಬಿಸಲು ವರಿಷ್ಠರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ವಾಪಸ್ ಅಖಾಡಕ್ಕೆ ಕರೆಸಿದ್ದು, ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದ್ದಾರೆ. ಅಂತೆಯೇ ತೆಲಂಗಾಣ, ರಾಜಸ್ಥಾನ, ಹರಿಯಾಣಕ್ಕೂ ಪ್ರಾತಿನಿಧ್ಯ ನೀಡಲಾಗಿದೆ.

ಬಿಜೆಪಿ ಆಂತರಿಕ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ನಿರ್ದೇಶನದ ಮೇರೆಗೆ ಬಿಎಸ್​ವೈ ಸೇರ್ಪಡೆ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಪಕ್ಷದ ಹಿರಿಯ ನಾಯಕರಾಗಿದ್ದ ದಿವಂಗತ ಜಗನ್ನಾಥ ರಾವ್ ಜೋಶಿ ಮತ್ತು ದಿವಂಗತ ಅನಂತಕುಮಾರ್ ನಂತರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿರುವ ರಾಜ್ಯದ ಮೂರನೇ ನಾಯಕ ಬಿ.ಎಸ್. ಯಡಿಯೂರಪ್ಪ. ಈ ಹಿನ್ನೆಲೆಯಲ್ಲಿ ವರಿಷ್ಠರು ನೀಡಿರುವ ಗೌರವ ಅತ್ಯುನ್ನತವಾದದ್ದೇ ಎನ್ನುವುದರಲ್ಲಿ ಅನುಮಾನವಿಲ್ಲ. ಕಳೆದ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರಿಂದ ರಾಜೀನಾಮೆ ಪಡೆದುಕೊಂಡ ಬಗ್ಗೆ ಮುಖ್ಯವಾಗಿ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ತೀವ್ರಗೊಂಡಿತ್ತು. ಹೊಸ ನಾಯಕತ್ವ ಬಂದು ವರ್ಷ ಕಳೆದಿದೆ.

ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಯಡಿಯೂರಪ್ಪನವರ ಅಗತ್ಯ ಮನಗಂಡ ವರಿಷ್ಠರು ರಾಷ್ಟ್ರೀಯ ವೇದಿಕೆಯಲ್ಲಿ ಸ್ಥಾನ ನೀಡುವ ಮೂಲಕ, ಬಿಎಸ್​ವೈರನ್ನು ನಾವು ಕಡೆಗಣಿಸಿಲ್ಲ. ಅವರು ಸದಾ ಪಕ್ಷದ ಬೆನ್ನೆಲುಬಾಗಿರಲಿದ್ದಾರೆ ಎಂಬ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.

ಸಂಚಲನ ಸೃಷ್ಟಿಸಿದ ನಿರ್ಧಾರ: ಹೈಕಮಾಂಡ್​ನ ಈ ನಿರ್ಧಾರ ಸಹಜವಾಗಿಯೇ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದು, ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಲಿದೆ. ರಾಷ್ಟ್ರಮಟ್ಟದ ಹುದ್ದೆಯಿಂದ ಯಡಿಯೂರಪ್ಪನವರು ಹೆಚ್ಚಿನ ಉತ್ಸಾಹದಿಂದ ಚುನಾವಣೆಯಲ್ಲಿ ಕೆಲಸ ಮಾಡಿ, ಅದು ಗೆಲುವಿನ ಪ್ರಮಾಣ ಹೆಚ್ಚಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹೀಗಿದ್ದರೂ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳುವವರು ದೆಹಲಿ ನಾಯಕರೇ. ಆದರೆ, ಯಡಿಯೂರಪ್ಪನವರನ್ನು ನಾವು ನಿರ್ಲಕ್ಷಿಸಿಲ್ಲ ಮತ್ತು ಮಹತ್ವದ ಹುದ್ದೆ ನೀಡಿ ಗೌರವಿಸಿದ್ದೇವೆ ಎಂಬ ರಾಜಕೀಯ ನಿರೂಪಣೆಯು ರಾಜ್ಯದಲ್ಲಿ ನೆಲಕಚ್ಚುತ್ತಿರುವ ಪಕ್ಷದ ವರ್ಚಸ್ಸಿನ ವೃದ್ಧಿಗೆ ನೆರವಾಗಲಿದೆ. ಮೇಲಾಗಿ, ಯಡಿಯೂರಪ್ಪನವರ ಬಗ್ಗೆ ನಾವು ಒಲವು ಹೊಂದಿದ್ದೇವೆ ಎಂಬ ಸಂದೇಶ ಕಳಿಸುವ ಅನಿವಾರ್ಯತೆ ಹೈಕಮಾಂಡಿಗಿತ್ತು. ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಈ ವಿಷಯ ಅರಿವಿಗೆ ಬಂದಿರಬಹುದು.

‘ಬಿಎಸ್​ವೈ ಪಕ್ಷದ ಪ್ರಶ್ನಾತೀತ ನಾಯಕ. ಗ್ರಾಮೀಣ ಭಾಗಗಳಲ್ಲಿ ಜನರು ಮುಖ್ಯಮಂತ್ರಿ ಯಾರೆಂದರೆ ಯಡಿಯೂರಪ್ಪ ಎನ್ನುತ್ತಾರೆ. ಅವರಿಗೆ ನೀಡುವ ಸಣ್ಣ ಗೌರವವೂ ಪಕ್ಷದ ಬಗ್ಗೆ ಜನರ ಸದಭಿಪ್ರಾಯ ದುಪ್ಪಟ್ಟುಗೊಳಿಸುತ್ತದೆ’ ಎಂದು ಪಕ್ಷದ ಹಿರಿಯ ಸಂಸದರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೇಸರ ತಗ್ಗಿಸುವ ತಂತ್ರ: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದುಗಳ ಹತ್ಯೆ ಖಂಡಿಸಿ ತೀವ್ರ ಹೋರಾಟ ಮಾಡಿ ಚುನಾವಣಾ ಲಾಭಗಳಿಸಿದ ಬಿಜೆಪಿ ನಾಯಕರೆಲ್ಲ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಇಂತಹ ಹತ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಸೋತಿದ್ದಾರೆಂಬ ಆಕ್ರೋಶ ಪಕ್ಷನಿಷ್ಠ ಕಾರ್ಯಕರ್ತರಲ್ಲಿದೆ. ಇದನ್ನು ತಿಳಿಗೊಳಿಸಬೇಕೆಂದರೆ ಯೋಗಿ ಮಾದರಿ ಆಡಳಿತ ಬೇಕು ಮತ್ತು ಖಡಕ್ ನಾಯಕತ್ವ ಬೇಕು ಎಂಬ ಆಗ್ರಹ ಅವರದ್ದು. ಆದರೆ, ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾಡಿದಲ್ಲಿ ಮತ್ತೆ ತಪ್ಪು ಸಂದೇಶ ರವಾನೆಯಾಗಬಹುದು ಮತ್ತು ಕಾಂಗ್ರೆಸ್ ಆರೋಪಗಳನ್ನು ನಾವು ಅಧಿಕೃತವಾಗಿ ಒಪ್ಪಿಕೊಂಡಂತಾಗಲಿದೆ ಎಂಬ ಆತಂಕ ಹೈಕಮಾಂಡ್​ನಲ್ಲಿದೆ. ಇದೇ ಕಾರಣಕ್ಕಾಗಿ, ಯಡಿಯೂರಪ್ಪನವರಿಗೆ ರಾಷ್ಟ್ರಮಟ್ಟದ ಉನ್ನತ ಹುದ್ದೆ ನೀಡುವ ಮೂಲಕ ರಾಜ್ಯ ರಾಜಕೀಯ ಅಖಾಡಕ್ಕೆ ಧುಮುಕುವಂತೆ ಮಾಡಿದ್ದಾರೆ. ಅಲ್ಲದೆ, ಕಾರ್ಯಕರ್ತರ ಬೇಸರ ತಗ್ಗಿಸಲೂ ಪ್ರಯತ್ನಿಸಿದ್ದಾರೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರೂ, ರಾಜಕೀಯ ಮೈದಾನದಲ್ಲಿ ಅವರ ಉಪಸ್ಥಿತಿ ತನಗೂ ಆತಂಕಕಾರಿ ಎಂಬುದು ಕಾಂಗ್ರೆಸ್​ಗೂ ಗೊತ್ತಿದೆ. ಈ ಎಲ್ಲ ಲೆಕ್ಕಾಚಾರ ಹಾಕಿಕೊಂಡೇ ಹೈಕಮಾಂಡ್ ಈ ತೀರ್ಮಾನ ಪ್ರಕಟಿಸಿದಂತಿದೆ.

ಬದಲಾವಣೆ ಕೂಗು: ದಕ್ಷಿಣ ಕನ್ನಡದ ಪ್ರವೀಣ್ ನೆಟ್ಟಾರು ಹತ್ಯೆ ಘಟನೆ ಬಳಿಕವಂತೂ ಸಿಎಂ, ಗೃಹ ಸಚಿವ ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ಕಾರ್ಯಕರ್ತರೇ ಅಭಿಯಾನ ಶುರು ಮಾಡಿದ್ದರು. ಡಬಲ್ ಇಂಜಿನ್ ಸರ್ಕಾರದಲ್ಲಿ ಕರ್ನಾಟಕದ ಇಂಜಿನ್ ಪೂರ್ತಿ ಹದಗೆಟ್ಟಿದೆ ಎಂದು ಸ್ವಪಕ್ಷೀಯರನ್ನೇ ಲೇವಡಿ ಮಾಡಿದ್ದುಂಟು. ಪ್ರವೀಣ್ ಮನೆಗೆ ಭೇಟಿ ನೀಡಲು ತೆರಳಿದ್ದ ರಾಜ್ಯಾಧ್ಯಕ್ಷರ ಕಾರನ್ನೇ ತಳ್ಳಾಡಿ ಕಾರ್ಯಕರ್ತರು ಆಕ್ರೋಶ ಸ್ಪೋಟಿಸಿದ್ದರು. ಭ್ರಷ್ಟಾಚಾರ ಕೇಸುಗಳು, ಆಡಳಿತದಲ್ಲಿನ ನಿಷ್ಕ್ರಿಯತೆ ಸೇರಿ ಹತ್ತು ಹಲವು ಕಾರಣಗಳಿಂದ ಬೇಸತ್ತ ಕಾರ್ಯಕರ್ತರನ್ನು ಸಮಾಧಾನ ಮಾಡಲೆಂದೇ ಹೈಕಮಾಂಡ್ ಈ ತಂತ್ರದ ಹಾದಿ ಅನುಸರಿಸಿದಂತಿದೆ.

ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯನನ್ನಾಗಿ ನೇಮಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೆ ಕೃತಜ್ಞತೆಗಳು. ಪಕ್ಷದ ಉನ್ನತ ಸಮಿತಿಯಲ್ಲಿ ಸೇವೆ ಸಲ್ಲಿಸುವ ಈ ಗೌರವಕ್ಕಾಗಿ ನಾನು ಆಭಾರಿಯಾಗಿದ್ದೇನೆ. | ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

ಮುಖ್ಯಾಂಶಗಳು

  • ಮೋದಿ, ಷಾ ಸೂಚನೆ ಮೇರೆಗೆ ಕ್ರಮ
  • ಬಿಜೆಪಿ ಸಂಸದೀಯ ಮಂಡಳಿ ಪುನಾರಚನೆ
  • ಬಿಎಸ್​ವೈ ಕಡೆಗಣಿಸಿಲ್ಲ ಎಂಬ ಸಂದೇಶ ರವಾನೆ
  • ಪ್ರಾದೇಶಿಕ ಹಾಗೂ ಜಾತಿವಾರು ಪ್ರಾತಿನಿಧ್ಯ
  • ಪಕ್ಷದ ವರ್ಚಸ್ಸು ವೃದ್ಧಿಗೆ ತಂತ್ರಗಾರಿಕೆ

ಮಹತ್ವವೇನು?: ಕೇಂದ್ರ ಸಂಸದೀಯ ಮಂಡ ಳಿಯು ಪಕ್ಷದ ಉನ್ನತಾಧಿಕಾರ ಸಮಿತಿ ಯಾಗಿದೆ. ಇದರಲ್ಲಿ 11 ಸದಸ್ಯರಿದ್ದು, ಚುನಾವಣಾ ಸಮಿತಿಯಲ್ಲೂ ಸ್ಥಾನ ಪಡೆದಿರುತ್ತಾರೆ. ಇವರೊಂದಿಗೆ ಇನ್ನೂ ಕೆಲವರನ್ನು ಚುನಾವಣಾ ಸಮಿತಿಗೆ ನೇಮಿಸಲಾಗುತ್ತದೆ. ರಾಜ್ಯ ಹಾಗೂ ಲೋಕಸಭಾ ಚುನಾವಣೆ ಹಾಗೂ ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ನಿರ್ಣಯಗಳನ್ನು ಈ ಸಮಿತಿ ಕೈಗೊಳ್ಳುತ್ತದೆ.

ಕೇಂದ್ರ ಸಂಸದೀಯ ಮಂಡಳಿ ಸದಸ್ಯರು: ಜೆ.ಪಿ. ನಡ್ಡಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಷಾ, ಬಿ.ಎಸ್. ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ. ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್​ಪುರ, ಸುಧಾ ಯಾದವ್, ಸತ್ಯನಾರಾಯಣ ಜಟಿಯಾ, ಬಿ.ಎಲ್. ಸಂತೋಷ್.

ಚುನಾವಣಾ ಸಮಿತಿ ಸದಸ್ಯರು: ಸಂಸದೀಯ ಮಂಡಳಿಯ 11 ಸದಸ್ಯ ರೊಂದಿಗೆ ಭೂಪೇಂದ್ರ ಯಾದವ್, ದೇವೇಂದ್ರ ಫಡ್ನವಿಸ್, ಓಂ ಮಾಥುರ್, ವನತಿ ಶ್ರೀನಿವಾಸ್