ಬೆಂಗಳೂರು: ಆರ್ಎಸ್ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂದು ಪ್ರತಿಪಕ್ಷ ಸಿದ್ದರಾಮಯ್ಯ ತಿಳಿದುಕೊಂಡಂತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.
ವಿಧಾನಸೌಧದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಿಶ್ವವೇ ಮೆಚ್ಚಿಕೊಂಡ ನಾಯಕ ಪ್ರಧಾನಿ ಮೋದಿ. ಇದನ್ನು ಮೊದಲಿಗೆ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಆಡುವ ಪ್ರತಿಯೊಂದು ಮಾತು ಕಾಂಗ್ರೆಸ್ನದ್ದಾಗುತ್ತದೆ ಎಂಬ ಎಚ್ಚರಿಕೆಯಿರಲಿ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿರಿ ಸೆಕ್ಸ್ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್ ಕುಮಟಳ್ಳಿ!
ಪ್ರತಿಪಕ್ಷ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಂಡು ಅಧಿವೇಶನದಲ್ಲಿ ರಚನಾತ್ಮಕ ಚರ್ಚೆ ನಡೆಸಲಿ. ಯಾವುದೇ ಟೀಕೆ-ಟಿಪ್ಪಣಿ ಆರೋಗ್ಯಕರವಾಗಿರಲಿ. ಸಲಹೆ ನೀಡಲಿ, ಸರ್ಕಾರ ಅದೆಲ್ಲವನ್ನೂ ಸ್ವೀಕರಿಸಿ ಉತ್ತರ ನೀಡಲು ಸಿದ್ಧವಿದೆ ಎಂದು ಬಿಎಸ್ ವೈ ಹೇಳಿದರು.
ದ್ವಂದ್ವ ನಿಲುವು: ಸದನದಲ್ಲಿ ಚರ್ಚಿಸಲು ಕಾಂಗ್ರೆಸ್ಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ 'ಒಂದು ದೇಶ ಒಂದು ಚುನಾವಣೆ' ವಿಷಯ ಚರ್ಚೆ ಬಗ್ಗೆ ದ್ವಂದ್ವ ನಿಲುವು ತಳೆದಿದೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿದ ವೇಳೆ ಪ್ರತಿಪಕ್ಷಗಳು ಒಪ್ಪಿಗೆ ನೀಡಿದ ಪ್ರಕಾರ ಸ್ಪೀಕರ್ ಎರಡು ದಿನಗಳ ಕಾಲ ಈ ವಿಷಯ ಚರ್ಚೆಗೆ ಅವಕಾಶ ಕಲ್ಪಿಸಿದ್ದು, ಕಾಂಗ್ರೆಸ್ ಕಡೆಯಿಂದ ಮಾತನಾಡುವುದಕ್ಕೆ 19 ಹೆಸರುಗಳ ಪಟ್ಟಿ ಕಳುಹಿಸಿ, ಈಗ ತಿರುಗಿ ಬಿದ್ದಿರುವುದಕ್ಕೆ ಏನು ಹೇಳಬೇಕು? ಎಂದು ಬಿಎಸ್ವೈ ಅಸಮಾಧಾನ ವ್ಯಕ್ತಪಡಿಸಿದರು.
ಭದ್ರಾವತಿ ಕ್ಷೇತ್ರದಲ್ಲಿ ಏನು ಅನ್ಯಾಯವಾಗಿದೆ? ಗೂಂಡಾಗಿರಿ ಯಾವ ರೀತಿ ನಡೆದಿದೆ? ಎನ್ನುವ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಹಾಗೆಯೇ ಕಾನೂನು ರೀತ್ಯ ಕ್ರಮಕ್ಕೂ ಹಿಂಜರಿಯುವುದಿಲ್ಲ ಎಂದು ಸಿಎಂ ಖಡಕ್ ಆಗಿ ಹೇಳಿದರು.
ಬಹು ದೊಡ್ಡ ಹೆಮ್ಮೆ: ನಾನು ಆರ್ಎಸ್ಎಸ್ ಕಾರ್ಯಕರ್ತ ಎಂದೇಳಲು ನನಗೆ ಬಹುದೊಡ್ಡ ಹೆಮ್ಮೆಯಿದೆ. ಈ ಸಂಘಟನೆಯ ತರಬೇತಿ, ಮಾರ್ಗದರ್ಶನದಿಂದ ಉನ್ನತಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಸ್ವತಃ ಪ್ರಧಾನಿ ಮೋದಿಯೇ ಸಂಘದ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಾರೆ. ಸ್ವಯಂ ಸೇವಕ ಸಂಘದ ಕಾರ್ಯಕರ್ತ ಎನ್ನುವುದೇ ಘನತೆ-ಗೌರವದ ಹೆಮ್ಮೆಯ ಸಂಕೇತ. ಇದನ್ನು ಪ್ರಶ್ನಿಸುತ್ತಿರುವ ಇವರು(ಸಿದ್ದರಾಮಯ್ಯ) ಯಾರು? ಹಿನ್ನೆಲೆ ಏನು ಎನ್ನುವುದು ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರೋಧಿಸಿದಷ್ಟು ಆರ್ಎಸ್ಎಸ್ ಪ್ರಬಲವಾಗುತ್ತದೆ. ಸಂಘಟನೆ ವಿಸ್ತಾರಗೊಳ್ಳುತ್ತದೆ ಎಂದು ಬಿಎಸ್ವೈ ಕುಟುಕಿದರು.