ನ್ಯೂಸ್

ಅಭಿವೃದ್ಧಿಗೆ ಚುರುಕು ಮುಟ್ಟಿಸಿದ ಬಿಎಸ್​ವೈ: ಸರ್ಕಾರಿ ಬಸ್​ಗಳಲ್ಲಿ ಸರಕು ಸಾಗಾಣಿಕೆ- ರಾಜ್ಯ ಸರ್ಕಾರದಿಂದಲೇ ರೈತರ ಬೆಳೆ ಖರೀದಿ

kumarvrl

ಬೆಂಗಳೂರು: ಕರೊನಾ ನಡುವೆಯೂ ಅಭಿವೃದ್ಧಿ ಕಾರ್ಯಗಳನ್ನು ಮತ್ತೆ ಹಳಿಗೆ ತಂದು ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ, ಈ ಸಂಬಂಧ ಗುರುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿ ರೈತರು, ವ್ಯಾಪಾರಿಗಳಿಗೆ ನೆರವಾಗುವಂಥ ಹಲವು ನಿರ್ಧಾರ ಕೈಗೊಂಡರು. ರೈತರು ಬೆಳೆದ ತರಕಾರಿಗಳು ಬೆಲೆ ಕಳೆದುಕೊಂಡಿರುವುದರಿಂದ ಅವುಗಳನ್ನು ಸರ್ಕಾರವೇ ಖರೀದಿಸಿ ಶೀತಲ ಗೃಹದಲ್ಲಿಟ್ಟು ಬಳಿಕ ಮಾರುವ ಅವಕಾಶದ ಬಗ್ಗೆ ನಿರ್ಧರಿಸಬೇಕು. ಹೆಚ್ಚು ದಿನ ಇಡಲು ಸಾಧ್ಯವಾಗದ ತರಕಾರಿ-ಹಣ್ಣು ಮತ್ತಿತರ ಬೆಳೆಗಳನ್ನು ಇತರ ರಾಜ್ಯ ಮತ್ತು ದೇಶಗಳಿಗೆ ಕಳುಹಿಸಿ ಮಾರಲು ವ್ಯವಸ್ಥೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲೆಲ್ಲಿ ಕುಡಿಯುವ ನೀರಿನ ಅಭಾವವಿದೆಯೋ ಅಲ್ಲೆಲ್ಲ ತುರ್ತಾಗಿ ಗುಣಮಟ್ಟದ ನೀರಿನ ಸರಬರಾಜು ಮಾಡಬೇಕು. ಕರೊನಾ ಬಗ್ಗೆ ಗ್ರಾಮಮಟ್ಟದಲ್ಲಿ ಟಾಸ್ಕ್​ಫೋರ್ಸ್ ರಚಿಸಲಾಗಿದ್ದು, ಅದನ್ನು ಇನ್ನಷ್ಟು ಚುರುಕುಗೊಳಿಸುವಂತೆ ಆದೇಶಿಸಿದರು. ಕೇಂದ್ರ ಸಚಿವ ಸದಾನಂದಗೌಡರಿಗೆ ಇದೇ ವೇಳೆ ದೂರವಾಣಿ ಕರೆ ಮಾಡಿದ ಸಿಎಂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ರೈತರಿಗೆ ಕಡಿಮೆ ಬೆಲೆಗೆ ಗೊಬ್ಬರ ಮಾರುವ ಬಗ್ಗೆ ಚರ್ಚೆ ನಡೆಯಿತು. ಅದನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಆತಂಕ ದೂರು ಮಾಡಲು ಸೂಚಿಸಲಾಯಿತು.

ಲೀಸ್ ಜಾಗ ವಾಪಸ್: ನಗರ ಪ್ರದೇಶಗಳಲ್ಲಿ ಸರ್ಕಾರಿ ಜಾಗ ಲೀಸ್​ಗೆ ಪಡೆದು ಇದುವರೆಗೂ ಕೆಲಸ ಶುರು ಮಾಡದೆ ಷರತ್ತು ಉಲ್ಲಂಘಿಸಿರುವ ಸಂಘ-ಸಂಸ್ಥೆಗಳನ್ನು ಗುರುತಿಸಿ, ಅಂಥ ಜಾಗಗಳನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ಸಿಎಂ ನಿರ್ದೇಶನ ನೀಡಿದರು. ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಗಮನ ಹರಿಸುವ ಜತೆಗೆ ಕರೊನಾ ಆತಂಕ ಇಲ್ಲ ಎಂಬುದನ್ನು ಹೆಚ್ಚು ಪ್ರಚಾರ ಮಾಡಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು. ಶಾಲೆ ತೆರೆಯುವವರೆಗೂ ಮಕ್ಕಳಿಗೆ ಆನ್​ಲೈನ್ ಮೂಲಕ ತರಬೇತಿ ನೀಡಲು ಮತ್ತು ದೂರದರ್ಶನದ ಮೂಲಕ ಪಾಠ ಹೇಳುವುದೂ ಸೇರಿ ಇತರ ಚಟುವಟಿಕೆಗಳಿಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಲಾಯಿತು. ಕೆಎಸ್​ಆರ್​ಟಿಸಿ ಸದ್ಯ ನೂರಾರು ಕೋಟಿ ರೂ. ನಷ್ಟದಲ್ಲಿದೆ. ಹಾಗಾಗಿ ಸರ್ಕಾರಿ ಬಸ್​ಗಳನ್ನು ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಆದಾಯ ಪಡೆಯಲು ಸೂಚಿಸಲಾಯಿತು. ಖಾಸಗಿ ಕಂಪನಿಗಳಿಗೆ ಬಸ್ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಯಿತು.

ಸಿಎಂ ಸೂಚನೆಗಳು

ಕಲ್ಯಾಣ ಕರ್ನಾಟಕ ಮತ್ತಿತರ ಅಭಿವೃದ್ಧಿ ಮಂಡಳಿಗಳ ಭಾಗದಲ್ಲಿ ತುರ್ತಾಗಿ ಆಗಬೇಕಾಗಿರುವ ಆಸ್ಪತ್ರೆ, ಶಿಕ್ಷಣ ಕುಡಿಯುವ ನೀರು ಸೌಲಭ್ಯದಂಥ ಕಾರ್ಯಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಕರೊನಾ ವಿರುದ್ಧ ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳ ಗಣನೀಯವಾಗಿ ಹೆಚ್ಚಿಸಬೇಕು. ರಾಜ್ಯದ ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದಾರೆ ಅದನ್ನು ರೈತರ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಹರಿಸಲು ಕ್ರಮಕೈಗೊಳ್ಳಬೇಕು. ಕಳೆದ ವರ್ಷದ ಅನಾಹುತ ಮರುಕಳಿಸದಂತೆ ಡ್ಯಾಮ್ಳಲ್ಲಿ ಪ್ರತಿನಿತ್ಯ ಲಭ್ಯವಿರುವ ನೀರಿನ ಮಾಹಿತಿ ಪಡೆದು ಗಮನ ಇಡಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.