ನ್ಯೂಸ್

ಬಿಎಸ್​ವೈ @ 79: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಶುಭಹಾರೈಕೆ, ಹಲವೆಡೆ ವಿಶೇಷ ಪೂಜೆ

arunakunigal

ಬೆಂಗಳೂರು: 79ನೇ ವಸಂತಕ್ಕೆ ಕಾಲಿಟ್ಟ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ರಾಜ್ಯಾದ್ಯಂತ ಬಿಎಸ್​ವೈ ಹೆಸರಿನಲ್ಲಿ ಅವರ ಅಭಿಮಾನಿಗಳು ಪೂಜೆ, ಹೋಮ ಮಾಡಿಸಿ ನೆಚ್ಚಿನ ನಾಯಕ ಆಯಸ್ಸು-ಆರೋಗ್ಯ ವೃದ್ಧಿಸಲೆಂದು ಪ್ರಾರ್ಥಿಸುತ್ತಿದ್ದಾರೆ. ಫೋನ್ ಮತ್ತು ಟ್ವೀಟ್ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಗಣ್ಯರು ಬಿಎಸ್​ವೈಗೆ ಶುಭ ಕೋರಿದ್ದಾರೆ.

'ಯಡಿಯೂರಪ್ಪ ಅವರು ಅನುಭವಿ ಆಡಳಿತಗಾರ. ಬಡವರ, ರೈತರ ಪಾಲಿನ ಆಶಾಕಿರಣ ಬಿಎಸ್​ವೈ. ದೇವರು ಆಯುರಾರೋಗ್ಯ ಕರುಣಿಸಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

'ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಕರುಣಿಸಿ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ' ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತಿಳಿಸಿದ್ದಾರೆ.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಹಾವೀರನ ವಿಗ್ರಹ ಹಾಗೂ ಪ್ರಸಾದವನ್ನು ಸಿಎಂ ಬಿಎಸ್‌ವೈಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ ಕುಟುಂಬಸ್ಥರು ಸಿಎಂಗೆ ಆರತಿ ಬೆಳಗಿ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದರು. ಕಾವೇರಿ ನಿವಾಸಕ್ಕೆ ಬೆಳಗ್ಗೆಯೇ ಆಗಮಿಸಿದ ನಳೀನ್ ಕುಮಾರ್ ಕಟೀಲ್, ಆರ್.ಅಶೋಕ್, ಉಮೇಶ್ ಕತ್ತಿ, ಪಿ.ಸಿ. ಮೋಹನ್, ನಟ ಜಗ್ಗೇಶ್, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಈರಣ್ಣ ಕಡಾಡಿ, ರಾಜ್ಯ ಬಿಜೆಪಿ ರೈತ ಮೋರ್ಚಾ ನಿಯೋಗ ಹಾಗೂ ಶಾಸಕರು ತಮ್ಮ ನಾಯಕನಿಗೆ ಜನ್ಮದಿನ ಶುಭಾಶಯ ತಿಳಿಸಿದರು.
'ರಾಜ್ಯದ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿಯಲು ಭಗವಂತ ತಮಗೆ ಎಲ್ಲ ರೀತಿಯ ಶಕ್ತಿ ನೀಡಲಿ, ಆಯುರಾರೋಗ್ಯ ಕರುಣಿಸಲಿ' ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಯಡಿಯೂರಪ್ಪರ ಜನ್ಮ ದಿನದ ಅಂಗವಾಗಿ ಶಿವಮೊಗ್ಗದಲ್ಲೂ ವಿಶೇಷ ಪೂಜೆ ನಡೆದಿದೆ. ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಎಂಎಲ್​ಸಿ ಎಸ್.ರುದ್ರೇಗೌಡ ಭಾಗವಹಿಸಿದ್ದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ