ಅಲಿಗಢ್: ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನ ಉಗ್ರರ ಪಾಲಿಗೆ ಸ್ವರ್ಗವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಉತ್ತರ ಪ್ರದೇಶ ಬಹುಜನ ಸಮಾಜ ಪಕ್ಷದ ಕೌನ್ಸಿಲರ್ ಸದ್ದಾಂ ಹುಸೇನ್ರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳ ದೇಗುಲದಲ್ಲಿ ಬಂಧಿಸಿದ ಬೆನ್ನಲ್ಲೇ ಸದ್ದಾಂ ಈ ಹೇಳಿಕೆಯನ್ನು ನೀಡಿದ್ದರು. ಅಂದೇ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಜುಲೈ 10ರಂದು ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬಂಧಿಸಲಾಗಿದೆ ಎಂದು ಅಲಿಗಢ್ ಎಸ್ಪಿ ಅಭಿಷೇಕ್ ತಿಳಿಸಿದ್ದಾರೆ. ಇದನ್ನೂ ಓದಿ: ಬೈರುತ್ ಸ್ಫೋಟ: 30 ಗಂಟೆ ಬಳಿಕ ಬಂದರು ಕಾರ್ಮಿಕ ರಕ್ತಸಿಕ್ತ ಸ್ಥಿತಿಯಲ್ಲಿ ಜೀವಂತ ಪತ್ತೆ!
ಮಹಾಕಾಳ ದೇವಸ್ಥಾನ ಉಗ್ರರ ತಾಣ ಎಂದು ಹೇಳಿಕೆ ನೀಡಿದ್ದ ಬಿಎಸ್ಪಿ ಕೌನ್ಸಿಲರ್ ವಿರುದ್ಧ ಬಿಜೆಪಿ ಯುವ ಘಟಕದ ನಾಯಕ, ಅಲಿಗಢ್ ಜಿಲ್ಲಾಧ್ಯಕ್ಷ ಮುಕೇಶ್ ಲೋಧಿ ದೂರು ದಾಖಲು ಮಾಡಿದ್ದರು.
ಉಜ್ಜಯಿನಿ ದೇವಸ್ಥಾನ ಪ್ರಸಿದ್ಧ ದೇಗುಲ. ಆದರೆ ಸದ್ದಾಂ ಹುಸೇನ್ ಅವರು ಇಂಥ ಹೇಳಿಕೆ ನೀಡುವ ಮೂಲಕ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮುಕೇಶ್ ಲೋಧಿ ತಿಳಿಸಿದ್ದಾರೆ. (ಏಜೆನ್ಸೀಸ್)