ನ್ಯೂಸ್

ಕೇಂದ್ರದಿಂದ ನೆರವು ಕೇಳಿದ ಬಿಎಸ್​ಎನ್​ಎಲ್; 40 ಸಾವಿರ ಕೋಟಿ ರೂ. ಒದಗಿಸುವಂತೆ ಮನವಿ..

Webdesk - Ravikanth

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್​ಎನ್​ಎಲ್) ಅಲ್ಪಾವಧಿ ಸಾಲ ಮರುಪಾವತಿಸುವುದಕ್ಕೆ 40 ಸಾವಿರ ಕೋಟಿ ರೂಪಾಯಿಯ ಹಣಕಾಸು ನೆರವನ್ನು ಕೇಂದ್ರ ಸರ್ಕಾರದ ಬಳಿ ಕೇಳಿದೆ. ಇದರಲ್ಲಿ ಅರ್ಧದಷ್ಟನ್ನು ಸಾವರಿನ್ ಗ್ಯಾರೆಂಟಿ ರೂಪದಲ್ಲಿ ನೀಡುವಂತೆ ವಿನಂತಿಸಲಾಗಿದೆ ಎಂದು ಕಂಪನಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪಿಕೆ ಪುರ್ವಾರ್ ತಿಳಿಸಿದ್ದಾರೆ.

ಕಂಪನಿಗೆ ಹೆಚ್ಚುವರಿ ಸಾಲದ ಅವಶ್ಯಕತೆ ಇಲ್ಲ. ಈಗಿರುವ ವ್ಯಾಪಾರ ವಹಿವಾಟಿಗೆ ಸ್ವಂತವಾಗಿ ಇರುವ ಹಣಕಾಸು ಸಾಕಾಗುತ್ತದೆ. ನಮ್ಮ ಅಲ್ಪಾವಧಿ ಸಾಲ ತೀರಿಸಲು 20 ಸಾವಿರ ಕೋಟಿ ರೂಪಾಯಿ ಸಾವರಿನ್ ಗ್ಯಾರೆಂಟಿ ಬೇಕು. ಮೊಬೈಲ್ ನೆಟ್​ವರ್ಕ್ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು 1 ಲಕ್ಷ ನೋಡ್ ಬಿ (ಮೊಬೈಲ್ ಸೈಟ್)ಗಳನ್ನು ಸ್ಥಾಪಿಸಬೇಕಾಗಿದ್ದು, ಇದಕ್ಕೆ ಇನ್ನೊಂದು 20,000 ಕೋಟಿ ರೂಪಾಯಿ ಬೇಕು ಎಂದು ತಿಳಿಸಿದ್ದಾರೆ. ಈಗ ಕೋರಿರುವ ಹಣಕಾಸಿನ ನೆರವು 2019ರಲ್ಲಿ ಘೋಷಿತವಾಗಿರುವ 69,000 ಕೋಟಿ ರೂಪಾಯಿ ಪ್ಯಾಕೇಜ್​ಗೆ ಹೊರತಾದುದು. ಪ್ರಸ್ತುತ ಬಿಎಸ್​ಎನ್​ಎಲ್ ಮೇಲೆ 30,000 ಕೋಟಿ ರೂಪಾಯಿ ಸಾಲದ ಹೊರೆ ಇದೆ. ಟೆಲಿಕಾಂ ಸೆಕ್ಟರ್​ನಲ್ಲಿ ಈ ಸಾಲದ ಹೊರೆ ಕನಿಷ್ಠ ಮಟ್ಟದ್ದಾಗಿದೆ ಎಂಬುದನ್ನು ಡೇಟಾ ತೋರಿಸಿದೆ.

ಕಡಿಮೆಯಾದ ಚಂದಾದಾರರು: ಬಿಎಸ್​ಎನ್​ಎಲ್ ದೂರಸಂಪರ್ಕ ರಂಗದಲ್ಲಿ ಯಾವ ಪರಿ ವರ್ಚಸ್ಸು ಗಳಿಸಿ ಹೊಸ ಎತ್ತರಕ್ಕೆ ತಲುಪಿತ್ತೋ, ಖಾಸಗಿ ಕಂಪನಿಗಳ ಪಾರಮ್ಯದಲ್ಲಿ ಅಷ್ಟೇ ವೇಗವಾಗಿ ಕುಸಿದು, ರೋಗಗ್ರಸ್ತವಾಯಿತು. ಇತ್ತೀಚಿನ ವರ್ಷಗಳಲ್ಲಂತೂ ಬಿಎಸ್​ಎನ್​ಎಲ್ ಅಂದರೆ ಬರೀ ಲಾಸ್ ಕಂಪನಿಯೆಂಬಂತೆ ಆಗಿಬಿಟ್ಟಿದೆ. ಹಾಗಾಗಿ, ಯಾರೂ ಇದಕ್ಕೆ ಬಂಡವಾಳ ಹೂಡುವುದಿರಲಿ, ಸುಧಾರಣೆ ಬಗ್ಗೆ ಮಾತಾಡುವ ಗೋಜಿಗೂ ಹೋಗುತ್ತಿಲ್ಲ. ಖಾಸಗಿ ಕಂಪನಿಗಳು ಬಿಎಸ್​ಎನ್​ಎಲ್​ನ ಸ್ಥಿತಿ ಕಂಡು ಒಳಗೊಳಗೆ ಸಂತೋಷ ಪಡುತ್ತಿದ್ದರೆ, ಇತ್ತ ಬಿಎಸ್​ಎನ್​ಎಲ್​ನ ನಷ್ಟ ಹೆಚ್ಚುತ್ತಲೇ ಸಾಗಿದೆ. ಗ್ರಾಹಕರ ಸಂಖ್ಯೆ ಕರಗತೊಡಗಿದೆ. 2008ರಲ್ಲಿ 80 ಕೋಟಿಯಿದ್ದ ಬಿಎಸ್​ಎನ್​ಎಲ್ ಚಂದಾದಾರರ ಸಂಖ್ಯೆ 2021ರಲ್ಲಿ 80 ಲಕ್ಷಕ್ಕೆ ಇಳಿದಿದೆ.

ಎಂಟಿಎನ್​ಎಲ್ ಹೊಣೆಗಾರಿಕೆ ವಿಸ್ತರಣೆ: ನಷ್ಟದಲ್ಲಿರುವ ಎಂಟಿಎನ್​ಎಲ್ ಮುಖ್ಯಸ್ಥರ ಹೆಚ್ಚುವರಿ ಹೊಣೆಗಾರಿಕೆಯನ್ನು ಪಿಕೆ ಪುರ್ವಾರ್ ಅವರಿಗೆ ಕೇಂದ್ರ ಸರ್ಕಾರ ಕಳೆದ ವರ್ಷ ನೀಡಿತ್ತು. ಈ ಹೊಣೆಗಾರಿಕೆ ಅವಧಿಯನ್ನು 2022ರ ಅಕ್ಟೋಬರ್ ತನಕ ವಿಸ್ತರಣೆ ಮಾಡಿದೆ. ಇನ್ನೊಂದೆಡೆ, ಎಂಟಿಎನ್​ಎಲ್ ಅನ್ನು ಬಿಎಸ್​ಎನ್​ಎಲ್ ಜತೆಗೆ ವಿಲೀನಗೊಳಿಸುವ ಪ್ರಸ್ತಾವನೆಯೂ ಇದೆ.

ಪ್ರಮುಖ ಸವಾಲುಗಳು

  • ಗ್ರಾಹಕರ ದೂರುಗಳು ತುಂಬ ಇದ್ದು, ಅವರು ಬಿಎಸ್​ಎನ್​ಎಲ್ ಸೇವೆಯಿಂದ ಸಂತುಷ್ಟರಾಗಿಲ್ಲ. ಹಾಗಾಗಿ, ಈ ನಿಟ್ಟಿನಲ್ಲಿ ತುರ್ತು ಸ್ಪಂದನೆ, ಪರಿಹಾರದ ಅಗತ್ಯವಿದೆ.
  • ನೆಟ್​ವರ್ಕ್​ ವಿಸ್ತರಿಸುತ್ತಿದ್ದರೂ ನಗರಪ್ರದೇಶಗಳಲ್ಲೇ ನೆಟ್​ವರ್ಕ್​ನ ಕ್ಷಮತೆ ಕ್ಷೀಣಿಸುತ್ತಿದೆ.
  • ಖಾಸಗಿ ಕಂಪನಿಗಳು ತೀವ್ರ ಸ್ಪರ್ಧೆ ಒಡ್ಡಿದ್ದು, ಮಾರುಕಟ್ಟೆಯನ್ನೂ ಆವರಿಸಿಕೊಂಡಿವೆ.
  • ಬಿಎಸ್​ಎನ್​ಎಲ್ ಇನ್ನಷ್ಟು ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ.