ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮೂಡಿಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ವಕೀಲ ಪರೀಕ್ಷಿತ್ ಜಾವಳಿ ಮನವಿ ಸಲ್ಲಿಸಿದರು. 
ನ್ಯೂಸ್

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸರಿಪಡಿಸಿ

ಮೂಡಿಗೆರೆ: ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಬಿಎಸ್‌ಎನ್‌ಎಲ್ ಗೋಪುರ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ತಾಲೂಕು ಘಟಕ ಶುಕ್ರವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿತು.
ವಿದ್ಯುತ್ ಕಡಿತಗೊಂಡಾಗ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸ್ಥಗಿತಗೊಳ್ಳುತ್ತದೆ. ಇದರಿಂದ ಸಾರ್ವಜನಿಕರು ಮೊಬೈಲ್ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಪಂ ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳಲ್ಲಿ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಣೆಗೆ ಅಡಚಣೆ ಉಂಟಾಗಿದೆ.
ತಾಲೂಕಿನ ಸುಂಕಸಾಲೆ, ಜಾವಳಿ, ಕೊಟ್ಟಿಗೆಹಾರ, ಬಣಕಲ್, ಕುಂದೂರು, ಭಾರತೀಬೈಲ್, ಜನ್ನಾಪುರ, ಮಾಕೋನಹಳ್ಳಿ, ದೇವವೃಂದ, ದಾರದಹಳ್ಳಿ ಮತ್ತಿತರ ಗ್ರಾಮಗಳಲ್ಲಿರುವ ಮೊಬೈಲ್ ಗೋಪುರ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ನೆಟ್‌ವರ್ಕ್ ಕಡಿತಗೊಳ್ಳುತ್ತದೆ. ತಾಲೂಕಿನಾದ್ಯಂತ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದೆ. ಕೆಲವೊಮ್ಮೆ ನೆಟ್‌ವರ್ಕ್ ಇದ್ದರೂ ಕರೆ ಮಾಡಲು ಮತ್ತು ಕರೆ ಸ್ವೀಕರಿಸಲು ಅಡಚಣೆ ಉಂಟಾಗುತ್ತಿದೆ. ಗ್ರಾಪಂ ಕಚೇರಿಗಳಿಗೆ ಒಎಫ್‌ಸಿ ಸೌಲಭ್ಯವಿದ್ದರೂ ಇಂಟರ್‌ನೆಟ್ ಸಂಪರ್ಕ ಪಡೆಯಲು ಹರಸಾಹಸ ಪಡಬೇಕಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಕೀಲ ಪರೀಕ್ಷಿತ್ ಜಾವಳಿ, ಅಧ್ಯಕ್ಷ ಟಿ.ಎಂ.ಗಜೇಂದ್ರ ಇದ್ದರು.