ನ್ಯೂಸ್

ಕದ್ದುಮುಚ್ಚಿ ಭಾರತದ ಭೂಪ್ರದೇಶಕ್ಕೆ ಬಂದ ಪಾಕ್​ ಮೀನುಗಾರರು ಬಿಎಸ್​ಎಫ್​ ಯೋಧರನ್ನು ನೋಡಿ ನೀರಿಗೆ ಹಾರಿದರು

ಭುಜ್​​: ಗುಜರಾತ್​ನಲ್ಲಿರುವ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಸರ್​ ಕ್ರೀಕ್​ ಕೊಲ್ಲಿಯ ಹರಾಮಿ ನಾಲಾ ಬಳಿ ಪಾಕಿಸ್ತಾನದ ನಾಲ್ಕು ಬೋಟ್​​ಗಳು ಗಡಿ ಭದ್ರತಾ ಪಡೆಯ ಯೋಧರು (BSF) ವಶ ಪಡಿಸಿಕೊಂಡಿದ್ದಾರೆ.

ಪಾಕಿಸ್ತಾನದ ಮೀನುಗಾರ ಅಲ್ಲಾ ಬಚಾವೊ ಸಿದ್ದೀಕ್ (25) ಎಂಬಾತ ಸಿಕ್ಕಿಬಿದ್ದಿದ್ದು, ಉಳಿದವರೆಲ್ಲ ತಪ್ಪಿಸಿಕೊಂಡಿದ್ದಾರೆ ಎಂದು ಬಿಎಸ್​ಎಫ್​ ಮೂಲಗಳು ತಿಳಿಸಿವೆ.

ಕಚ್​​ ಪ್ರದೇಶದಲ್ಲಿ ಮುಂಜಾನೆ 6ಗಂಟೆಗೆ ಪಾಕಿಸ್ತಾನದ ಬೋಟ್​​ಗಳು ಹಾಗೂ ಅದರಲ್ಲಿ ಜನರು ಇದ್ದಾರೆ ಎಂಬುದನ್ನು ಗಮನಿಸಿದ ಭುಜ್​ ಘಟಕದ ಬಿಎಸ್​ಎಫ್​ ಗಸ್ತು ಪಡೆ ಕಾರ್ಯಾಚರಣೆ ನಡೆಸಿ, ದೋಣಿಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ನಾಡದೋಣಿ; ನಾಲ್ವರು ಮೀನುಗಾರರು ನಾಪತ್ತೆ

ಪಾಕ್​ ದೋಣಿಯಲ್ಲಿದ್ದವರು ಕದ್ದುಮುಚ್ಚಿ ಭಾರತದ ಭೂಪ್ರದೇಶಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದರು. ಅದನ್ನು ಬಿಎಸ್​ಎಫ್​ ಪಡೆ ತಡೆದಿದೆ. ನಮ್ಮ ಸೈನಿಕರನ್ನು ನೋಡುತ್ತಿದ್ದಂತೆ ಬೋಟ್​​ಗಳಲ್ಲಿದ್ದ ಹಲವರು ನೀರಿಗೆ ಹಾರಿದ್ದಾರೆ. ಅದರಲ್ಲಿ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ ಎಂದು ಬಿಎಸ್​ಎಫ್​ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾದ ನಾಲ್ಕೂ ದೋಣಿಗಳನ್ನೂ ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಸಿಕ್ಕಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)