ಬೆಂಗಳೂರು: ಕೋವಿಡ್ ಅಬ್ಬರ, ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಹೀಗೆ ನಾನಾ ಅಡ್ಡಿ-ಆತಂಕಗಳಲ್ಲೇ 2021ನೇ ವರ್ಷ ಮುಗಿದುಹೋಗಿದ್ದರಿಂದ 2021-22ನೇ ಸಾಲಿನ ಆಯವ್ಯಯವೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳಲಿಲ್ಲ. 2021-22ನೇ ಸಾಲಿನ ಆಯವ್ಯಯವನ್ನು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 2021ರ ಮಾರ್ಚ್ 8ರಂದು ಮಂಡಿಸಿದ್ದರು. ಸಾಂಕ್ರಾಮಿಕದ ನಡುವೆಯೂ ವಿತ್ತೀಯ ಶಿಸ್ತು ಪಾಲನೆ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವುದು ಕತ್ತಿಯ ಅಲಗಿನ ಮೇಲಿನ ನಡಿಗೆಯ ಅನುಭವ ನೀಡಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದ ಬಿಎಸ್ವೈ, ‘ಅಳ್ಳೆದೆ ಅವನತಿಯ ದಾರಿ ಆತ್ಮವಿಶ್ವಾಸ ಯಶಸ್ಸಿನ ಪರಿ’ ಎಂಬ ಅನುಭವ ವಾಣಿಯನ್ನು ಬಜೆಟ್ ವೇಳೆ ಪ್ರಸ್ತಾಪಿಸಿದ್ದರು.
ಆದರೆ ಬಜೆಟ್ ಮಂಡನೆಯ ದಿನದಿಂದಲೇ ರಾಜ್ಯದಲ್ಲಿ ಕರೊನಾ ಪ್ರಕರಣ ಏರುತ್ತಲೇ ಹೋಗಿತ್ತು. ಬಜೆಟ್ ಮಂಡಿಸಿ ನಾಲ್ಕು ತಿಂಗಳು ಕೋವಿಡ್ ಅಬ್ಬರ ಇದ್ದು, ಅದರ ನಿರ್ವಹಣೆಯೇ ಪ್ರಧಾನ ಆದ್ಯತೆಯಾಗಿತ್ತು. ಅಂದರೆ ಕರೊನಾ ವಿರುದ್ಧದ ಹೋರಾಟದಲ್ಲೇ ಆಡಳಿತಯಂತ್ರ ತೊಡಗಿ, ಸುಸ್ತೆದ್ದು ಹೋಗಿತ್ತು. ಹಾಗೂ ಹೀಗು ಮೂರು ವಾರ ಕಳೆಯುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ, ಹೊಸ ಸಿಎಂ ಪದಗ್ರಹಣ, ಸಂಪುಟ ರಚನೆಯಂತಹ ಪ್ರಕ್ರಿಯೆಯಲ್ಲೇ ಕಳೆದುಹೋಯಿತು. ಹೀಗೆ ಪ್ರಮುಖ ತೀರ್ಮಾನ ಕೈಗೊಳ್ಳಬೇಕಾದ ಸಂದರ್ಭ ಆಡಳಿತ ಯಂತ್ರದ ದೃಷ್ಟಿ ಅನ್ಯಕಾರಣದತ್ತ ನೆಟ್ಟಿತ್ತು.
ಮಹಿಳೆಯರು, ಕೃಷಿ ಮತ್ತು ಪೂರಕ, ಸವೋದಯ ಮತ್ತು ಕ್ಷೇಮಾಭಿವೃದ್ಧಿ, ಬೆಂಗಳೂರು ನಗರ ಅಭಿವೃದ್ಧಿ, ಸಂಸ್ಕೃತಿ, ಆಡಳಿತ ಸುಧಾರಣೆ ಮತ್ತು ಸೇವೆ ಎಂದು ಆರು ವಿಭಾಗ ಮಾಡಿ ಬಜೆಟ್ ಮಂಡಿಸಲಾಗಿತ್ತು, ಇಲಾಖಾ ವಾರು ಪ್ರತ್ಯೇಕವಾಗಿ ಪ್ರಸ್ತಾಪಿಸಿರಲಿಲ್ಲ. ಬಜೆಟ್ನಲ್ಲಿ ಪ್ರಕಟಿಸಿದ ಯೋಜನೆಗಳಲ್ಲಿ ಕೆಲವು ತಕ್ಷಣಕ್ಕೆ ಆಗುವಂತವು ಮತ್ತೆ ಕೆಲವು ದೀರ್ಘಾವಧಿಯಲ್ಲಿ ಅನುಷ್ಠಾನ ಆಗುವಂತಹವು. ಇನ್ನು ಕೆಲವು ನಿರ್ಣಯಗಳು. ಈ ಪೈಕಿ ಹತ್ತಾರು ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಸರ್ಕಾ ರಕ್ಕೆ ಮಾಡಲು ಸಾಧ್ಯವಾಗಿಲ್ಲ. ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ದೊಡ್ಡ ಮಟ್ಟದ ಹಿನ್ನೆಡೆಯಾಗಿದೆ. ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ, ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ಕೋವಿಡ್ ನೆಪ ಹೇಳಿ ಪ್ರಕ್ರಿಯೆ ನಡೆಸಿಲ್ಲ.
ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ.4ರ ರಿಯಾಯಿತಿ ಬಡ್ಡಿ ದರದಲ್ಲಿ ಮಹಿಳಾ ಅಭಿವೃದ್ಧಿ ನಿಗಮ, ರಾಜ್ಯ ಹಣಕಾಸು ಸಂಸ್ಥೆಯಿಂದ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ, ಗ್ರಾಮೀಣ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ, ಮಹಿಳಾ ಸ್ವಸಹಾಯ ಸಂಘಗಳು, ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ, ಇ- ಮಾರುಕಟ್ಟೆ ಸೌಲಭ್ಯ, ಬೆಂಗಳೂರು ಗಾರ್ವೆಂಟ್ ಉದ್ಯಮದ ಮಹಿಳಾ ಕಾರ್ವಿುಕರಿಗೆ ಬಿಎಂಟಿಸಿಯಲ್ಲಿ ಬಸ್ ಪಾಸ್ ಸಹ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳಿಂದ ಉತ್ತರ ಬರುತ್ತದೆ. ಮುಖ್ಯವಾಗಿ ಸಚಿವರ ನಿರುತ್ಸಾಹ ಎದ್ದು ಕಾಣಿಸುತ್ತಿದೆ.
ಕಾಲುಸಂಕ ನಿರ್ವಿುಸುವ ಗ್ರಾಮಬಂಧ ಸೇತುವೆ ಯೋಜನೆ, ಆಹಾರ ಪಾರ್ಕ್, ತೋಟಗಾರಿಕೆ ತಂತ್ರಜ್ಞಾನ ಪಾರ್ಕ್, ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ಬ್ರಾಂಡ್ ವ್ಯಾಲ್ಯೂ ಕಲ್ಪಿಸುವ ಯೋಜನೆ, ಹೊಸ ಹೈಬ್ರಿಡ್ ಬೀಜ ನೀತಿ ಓಕಳಿಪುರದಲ್ಲಿ ರೇಷ್ಮೆ ಭವನ, ಹೂವಿನ ಮಾರುಕಟ್ಟೆ, ಒಣಮೆಣಸಿನ ಕಾಯಿ ಮಾರುಕಟ್ಟೆ, ಬ್ಯಾಡಗಿಯಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕ, ರಾಜ್ಯದ ಆಯ್ದ ಮಹಾನಗರ ಪಾಲಿಕೆ, ನಗರಸಭೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು, ನವೀನ, ಉದಯೋನ್ಮುಖ ತಂತ್ರಜ್ಞಾನದ ಸಂಸ್ಥೆಗಳಿಗೆ ಬೆಂಬಲ ನೀಡಲು 100 ಕೋಟಿ ರೂ.ಗಳ ಹೊಸ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪನೆ, ಕ್ವಾಂಟಂ ಕಂಪ್ಯೂಟಿಂಗ್, ಸಂಬಂಧಿತ ತಂತ್ರಜ್ಞಾನಗಳ ಸಂಶೋಧನೆ ಉತ್ತೇಜಿಸಲು ಸಂಶೋಧನಾ ಪಾರ್ಕ್, ಭೀಮಸೇನ ಜೋಶಿಯವರ 100ನೇ ಜನ್ಮದಿನಾರಚಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ ಹಾಗೂ ವಿಚಾರ ಸಂಕಿರಣ, ಅರಣ್ಯ ಇ-ಪರಿಹಾರ ಯೋಜನೆ, ಹೊಸ ಆನೆ ಶಿಬಿರ, ಕಾಂಟ್ಯಾಕ್ಟ್ಲೆಸ್, ಫೇಸ್ಲೆಸ್ ಮತ್ತು ಕ್ಯಾಶ್ಲೆಸ್ ವ್ಯವಸ್ಥೆ ಮೂಲಕ ಸಾರಿಗೆ ಇಲಾಖೆ ಮೂರು ಸೇವೆ, 52 ಹೊಸ ಬಸ್ ನಿಲ್ದಾಣ, 16 ಬಸ್ ಘಟಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.
ಛಾಪು ಮೂಡಿಸಲು ಯತ್ನ: ಪ್ರಮುಖ ಸಂಗತಿ ಎಂದರೆ ಬಿಎಸ್ವೈ ಛಾಯೆಯನ್ನು ಮೀರದಂತೆ ತಮ್ಮ ಛಾಪು ಮೂಡಿಸಲು ಬಸವರಾಜ ಬೊಮ್ಮಾಯಿ ಹಲವು ಯೋಜನೆ ಜಾರಿ ಮಾಡಿ ಅದರ ಅನುಷ್ಠಾನಕ್ಕೆ ಒತ್ತು ನೀಡಿದರು. ಸ್ವಾತಂತ್ರೊ್ಯೕತ್ಸವ ಸಂದರ್ಭದಲ್ಲಿ ಅಮೃತ ಯೋಜನೆಗಳ ಸರಣಿಯನ್ನು ಪ್ರಕಟಿಸಿ, ಅದರ ಅನುಷ್ಠಾನದಲ್ಲೆ ತಲ್ಲೀನರಾಗಿರುವುದು ಎದ್ದುಕಾಣಿಸುತ್ತಿದೆ.
ಅನುಷ್ಠಾನ ಆಗಿದ್ದೇನೇನು?: ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳ ಮಕ್ಕಳ ಆರೈಕೆ ರಜೆ ಸೌಲಭ್ಯ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಶೇ.50 ಹೆಚ್ಚಿಸಲಾಗಿದೆ. ? ದ್ರಾಕ್ಷಿ ಕೃಷಿ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯಾಗಿ ಪುನರ್ ರಚನೆಯಂತಹ ತೀರ್ವನಗಳನ್ನು ಘೋಷಿಸಿದಂತೆಯೇ ಕೈಗೊಳ್ಳಲಾಗಿದೆ.