ನ್ಯೂಸ್

ಮಹಿಳಾ ಮೀಸಲಾತಿ ಮಸೂದೆ: ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ ಎಂದ ಕವಿತಾ

ಆಂಧ್ರಪ್ರದೇಶ: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವುದಕ್ಕೆ ಎಂಎಲ್​​​ಸಿ ಕಲ್ವಕುಂಟ್ಲ ಕವಿತಾ ಸಂತಸ ವ್ಯಕ್ತಪಡಿಸಿದ್ದು, ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ ಕವಿತಾ ಈಗಲೂ ಕೇಂದ್ರ ಮಹಿಳಾ ಮೀಸಲಾತಿ ಮಸೂದೆ ತರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆಗೆ ಪ್ರತಿಕ್ರಿಯಿಸಿರುವ ಕವಿತಾ ಈ ನಿಟ್ಟಿನಲ್ಲಿ ಹೈದರಾಬಾದ್​​​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಕೇಂದ್ರ ಸರ್ಕಾರ ಮಂಡಿಸುತ್ತಿರುವ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಈ ಹಿಂದೆ ಹೇಳಿದ ಅಂಶಗಳೇ ಇವೆಯೇ ಅಥವಾ ಸಂಪೂರ್ಣವಾಗಿ ಮಾರ್ಪಡಿಸಿದ ಮಸೂದೆಯನ್ನು ಪರಿಚಯಿಸುತ್ತಿದೆಯೇ ಎಂದು ಕವಿತಾ ಪ್ರಶ್ನಿಸಿದರು. ಈ ಹಿಂದೆ ರಾಜ್ಯಸಭೆಯಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯ ನಿಬಂಧನೆಗಳೂ ಇದರಲ್ಲಿ ಸೇರಿವೆಯೇ ಎಂಬ ಬಗ್ಗೆ ಸ್ಪಷ್ಟತೆ ಬೇಕು ಹೇಳಿದ ಅವರು, ಇನ್ನಷ್ಟು ಮಹಿಳೆಯರು ಶಾಸನಸಭೆ ಪ್ರವೇಶಿಸಲಿ ಎಂದು ಹಾರೈಸಿದರು.

ಮಹಿಳಾ ಮೀಸಲಾತಿ ಮಸೂದೆ ತರುವಂತೆ ಈ ಹಿಂದೆ ಸಿಎಂ ಕೆಸಿಆರ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು ಎಂದು ಕವಿತಾ ನೆನಪಿಸಿದರು . ಕವಿತಾ ಅವರು ಕೂಡ ಈ ಮಸೂದೆಗಾಗಿ ಮುತುವರ್ಜಿವಹಿಸಿ ಹೋರಾಟ ನಡೆಸಿದ್ದರು.

ಕೇಂದ್ರ ಸಚಿವ ಸಂಪುಟದ ಅನುಮೋದನೆ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಂಜೆ 6:30ಕ್ಕೆ ಆರಂಭವಾದ ಸಭೆ ಎರಡು ಗಂಟೆಗೂ ಹೆಚ್ಚು ಕಾಲ ನಡೆಯಿತು. ಈ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾದರೆ, ಶಾಸನಸಭೆಗಳಲ್ಲಿ (ಸಂಸತ್ತು ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ) ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ನೂತನ ಸಂಸತ್ ಭವನದಲ್ಲಿ (ಸೆ.19) ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ ವಿಧೇಯಕವಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಲಿದೆ.

ಸಂಸತ್ತಿನ ಸಭೆಗಳನ್ನು ಹಳೆಯ ಕಟ್ಟಡದಿಂದ ಹೊಸ ಸಂಸತ್ ಭವನಕ್ಕೆ ಸ್ಥಳಾಂತರಿಸಲು ಈ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಲಭಿಸಿದೆ. ಮೇಲಾಗಿ ಸಂಸತ್ತಿನ ವಿಶೇಷ ಅಧಿವೇಶನಗಳಲ್ಲಿ ಮಂಡಿಸಲಿರುವ ಪ್ರಮುಖ ವಿಧೇಯಕಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದಂತಿದೆ. ಈ ವಿಶೇಷ ಸಭೆಗಳಲ್ಲಿ ಐತಿಹಾಸಿಕ ನಿರ್ಧಾರಗಳಾಗಲಿವೆ ಎಂದು ಪ್ರಧಾನಿ ಮೋದಿ ಸಭೆಗಳಿಗೂ ಮುನ್ನ ಹೇಳಿದ್ದು ಗೊತ್ತೇ ಇದೆ. ಇದಾದ ನಂತರ ಕೇಂದ್ರ ಸಚಿವ ಸಂಪುಟ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸೋಮವಾರ (ಸೆಪ್ಟೆಂಬರ್ 18) ಕೇಂದ್ರ ಸಚಿವ ಸಂಪುಟ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಚಿವರೊಂದಿಗೆ ಸಭೆ ನಡೆಸಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಯಾಬಿನ್‌ನಲ್ಲಿ ಸಭೆ ನಡೆಯಿತು. ಸಚಿವರಾದ ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ ಮುರಳೀಧರನ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.