Abstained voting: ಜಗದೀಪ್ ಧನಕರ್ ಹಠಾತ್ ರಾಜೀನಾಮೆಯಿಂದ ತೆರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ. 09) ಚುನಾವಣೆ ನಡೆಯುತ್ತಿದ್ದ, ತೆಲಂಗಾಣದ ಬಿಆರ್‌ಎಸ್, ಒಡಿಶಾದ ಬಿಜೆಡಿ, ಪಂಜಾಬ್ನ ಶಿರೋಮಣಿ ಅಕಾಲಿದಳ ಪಕ್ಷದ ಸಂಸದರು ಮತದಾನದಿಂದ ದೂರ ಉಳಿದಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಕೂಟದ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಮತ್ತು ವಿಪಕ್ಷಗಳ ಇಂಡಿಯಾ ಬಣದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಸ್ಪರ್ಧಿಸಿದ್ದು, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮತ ಹಾಕುತ್ತಿದ್ದಾರೆ.
ಮೂರು ಪಕ್ಷಗಳು ಮತದಾನದಿಂದ ದೂರ ಉಳಿಯಲು ಕಾರಣವೇನು?
ಬಿಜು ಜನತಾ ದಳ (ಬಿಜೆಡಿ)
ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ (ಬಿಜೆಡಿ) ತನ್ನ ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಲಿದ್ದಾರೆ ಎಂದು ಘೋಷಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ, ಎರಡರಿಂದಲೂ "ಸಮಾನ ಅಂತರವನ್ನು ಕಾಯ್ದುಕೊಳ್ಳುವ" ನೀತಿಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷ ಹೇಳಿದೆ.
ಬಿಜೆಡಿಯು ರಾಜ್ಯಸಭೆಯಲ್ಲಿ ಏಳು ಸಂಸದರನ್ನು ಹೊಂದಿದೆ. ನಿರಂಜನ್ ಬಿಶಿ, ಸುಲತಾ ಡಿಯೋ, ಮುಜಿಬುಲ್ಲಾ ಖಾನ್, ಸುಭಾಶಿಶ್ ಖುಂಟಿಯಾ, ಮಾನಸ್ ರಂಜನ್ ಮಂಗರಾಜ್, ಸಸ್ಮಿತ್ ಪಾತ್ರ ಮತ್ತು ದೇಬಶಿಶ್ ಸಮಂತರಾಯ್. ಲೋಕಸಭೆಗೆ ಈ ಬಾರಿ ಯಾವುದೇ ಸಂಸದರು ಆಯ್ಕೆ ಆಗಿಲ್ಲ.
ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ ಕೂಡ ಯೂರಿಯಾ ಕೊರತೆಯಿಂದಾಗಿ ರಾಜ್ಯದ ರೈತರು ಅನುಭವಿಸುತ್ತಿರುವ "ಸಂಕಟ"ವನ್ನು ಉಲ್ಲೇಖಿಸಿ ಮತದಾನವನ್ನು ಬಹಿಷ್ಕರಿಸಿದೆ.
ಈ ಕುರಿತು ಮಾತನಾಡಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಕಳೆದ 20 ದಿನಗಳಿಂದ ಬಿಆರ್‌ಎಸ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಯೂರಿಯಾ ಕೊರತೆಯ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಆದರೆ ಎರಡೂ ಸರ್ಕಾರಗಳು ಸ್ಪಂದಿಸಲು ವಿಫಲವಾಗಿವೆ. ಪ್ರತಿಭಟನೆಯ ಸಂಕೇತವಾಗಿ 71 ಲಕ್ಷ ತೆಲಂಗಾಣ ರೈತರ ಒಗ್ಗಟ್ಟಿನ ಸಂಕೇತವಾಗಿ ಬಿಆರ್‌ಎಸ್ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ನೋಟಾ ಒಂದು ಆಯ್ಕೆಯಾಗಿದ್ದರೆ, ನಾವು ಅದನ್ನು ಆರಿಸಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.
ಬಿಆರ್‌ಎಸ್ ರಾಜ್ಯಸಭೆಯಲ್ಲಿ ನಾಲ್ಕು ಸಂಸದರನ್ನು ಹೊಂದಿದೆ . ದಾಮೋದರ್ ರಾವ್ ದಿವಕೊಂಡ ರೆಡ್ಡಿ, ಬಿ ಪಾರ್ಥಸಾರಧಿ ರೆಡ್ಡಿ, ಕೆ.ಆರ್. ಸುರೇಶ್ ರೆಡ್ಡಿ ಹಾಗೂ ರವಿಚಂದ್ರ ವಡ್ಡಿರಾಜು. ಲೋಕಸಭೆಗೆ ಈ ಬಾರಿ ಯಾವುದೇ ಸಂಸದರು ಆಯ್ಕೆ ಆಗಿಲ್ಲ.
ಶಿರೋಮಣಿ ಅಕಾಲಿ ದಳ
ಪಂಜಾಬ್ನಲ್ಲಿ ಭೀಕರ ಪ್ರವಾಹವನ್ನು ಉಲ್ಲೇಖಿಸಿ ರಾಜ್ಯದ ಆಪ್ ಸರ್ಕಾರ, ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿದಿದೆ. ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಎಸ್ಎಡಿ ಪಕ್ಷದ ಏಕೈಕ ಸಂಸದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅಕಾಲಿದಳ, ಪಂಜಾಬ್ ಮತ್ತು ಪಂಜಾಬಿಗಳು ಯಾವಾಗಲೂ ರಾಷ್ಟ್ರದ ಪರವಾಗಿ ನಿಂತಿದ್ದಾರೆ. ಆದರೆ ಇಂದು, ಪಂಜಾಬಿಗಳು ಅಭೂತಪೂರ್ವ ಪ್ರವಾಹದಿಂದಾಗಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದ ಸುಮಾರು ಮೂರನೇ ಒಂದು ಭಾಗವು ನೀರಿನಲ್ಲಿ ಮುಳುಗಿದೆ, ಮನೆಗಳು ಮತ್ತು ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರವಾಗಲಿ ಪಂಜಾಬಿಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಮುಂದೆ ಬಂದಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)