ನ್ಯೂಸ್

ಸಿಎಂ ಜಗನ್​ ವಿರುದ್ಧ ಸಿಡಿದೆದ್ದ ಸಹೋದರಿ; ರಾಜಕೀಯ ಅಖಾಡದಲ್ಲಿ ಅಣ್ಣಾ- ತಂಗಿ ಜಟಾಪಟಿ ಶುರು

ಆಂಧ್ರಪ್ರದೇಶ: ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರರೆಡ್ಡಿ ಪುತ್ರಿ, ಸಿಎಂ ಜಗನ್​ ಮೋಹನ್​ ರೆಡ್ಡಿ ಸಹೋದರಿ ವೈಎಸ್​ಆರ್​ ತೆಲಂಗಾಣ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಗುರುವಾರ ದೆಹಲಿಯಲ್ಲಿ ರಾಹುಲ್​ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇಪರ್ಡೆಯಾದ ಬೆನ್ನಲೇ ಆಂಧ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಹೈದರಾಬಾದ್​ನಿಂದ ಕಮ್ಮಂ ಜಿಲ್ಲೆಗೆ ಕಾರ್​ ಯಾತ್ರೆ ಮೂಲಕ ಸಂಕಲ್ಪ ಸಭಾ ಎಂಬ ಬೃಹತ್ ಸಮಾವೇಶದಲ್ಲಿ ‘ಸಿಂಹ ಒಂಟಿಯಾಗಿ ಬರುತ್ತದೆ’ ಎಂದು ರಜನಿಕಾಂತ್ ಡೈಲಾಗ್ ಹೊಡೆದು, ತಾವು ಯಾವುದೇ ರಾಜಕೀಯ ಪಕ್ಷದ ನೆರಳಿನಲ್ಲಿ ಕೆಲಸ ಮಾಡುವುದಿಲ್ಲ ತೆಲಂಗಾಣಕ್ಕೆ ನಮ್ಮದೇ ಸ್ವತಃ ಪಕ್ಷವನ್ನು ಆರಂಭಿಸುತ್ತೇವೆ ಎಂದಿದ್ದ ಶರ್ಮಿಳಾ ಇತ್ತಿಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸದೆ ಅಂತರ ಕಾಯ್ದುಕೊಂಡಿದ್ದರು, ಮೂಲಗಳ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತಂದು ನಂತರ ಕೈ ಸೇರ್ಪಡೆಯಾಗಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್​ವನ್ನು ಅಧಿಕಾರಕ್ಕೆ ತರಬೇಕೆಂದು ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್​ ಸೇರುವುದರಿಂದ ಆಂಧ್ರಪ್ರದೇಶದಲ್ಲಿ ಪಕ್ಷ ಬಲಗೊಳ್ಳಲಿದೆ. ರಾಹುಲ್​ ಗಾಂಧಿ ಪ್ರಧಾನಿಯಾಗಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂದಿರುವ ಶರ್ಮಿಳಾ ಅವರ ತಂದೆ ದಿವಂಗತ ರಾಜಶೇಖರ್​ ರೆಡ್ಡಿ ಅಖಂಡ ಆಂಧ್ರಪ್ರದೇಶದಲ್ಲಿ 2004 ರಿಂದ 2009 ರವರೆಗೆ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿದ್ದರು. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧೀ ಜೊತೆ ಉತ್ತಮ ಸಂಬಂಧ ಹೊಂದಿದ್ದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷವನ್ನು ಬೂತ್​ ಮಟ್ಟದಿಂದ ಬಲಿಷ್ಠ ಗೊಳಿಸಿದ್ದರು, ರಾಜಶೇಖರ್​ ರೆಡ್ಡಿ ಅಕಾಲಿಕ ಮರಣದಿಂದ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್​​ಗೆ​ ಸಂಪೂರ್ಣ ಹಿನ್ನಡೆಯಾಗಿತ್ತು.

ದಿವಂಗತ ರಾಜಶೇಖರೆಡ್ಡಿ ಕಸಸು ಈಡೇರಿಸುತ್ತೇನೆ; ಶರ್ಮಿಳಾ

3000 ಕಿ.ಮೀ ಪಾದಯಾತ್ರೆ ಮಾಡಿ ಕೈಗೆ ಸೆಡ್ಡು ಹೊಡೆದಿದ್ದ ಶರ್ಮಿಳಾ, ತಾಯಿ ವಿಜಯಮ್ಮ: ಶರ್ಮಿಳಾ ತಮ್ಮ ರಾಜಕೀಯ ಪಯಣ ಆರಂಭಿಸಿದ್ದು, ಕಷ್ಟದ ಪರಿಸ್ಥಿತಿಯಲ್ಲಿ, ಮೇ 2012 ರಲ್ಲಿ ಜಗನ್ ಅವರನ್ನು ಹೆಚ್ಚಿನ ಹಣ ಗಳಿಕೆ ಹಗರಣದಲ್ಲಿ ಸಿಬಿಐ ಬಂಧಿಸಿತ್ತು. ಜಗನ್ ಮೋಹನ್​ ರೆಡ್ಡಿ ಜೈಲಿಗೆ ಹೋದ ನಂತರ ಶರ್ಮಿಳಾ ತಾಯಿ ವಿಜಯಮ್ಮ ಜೊತೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದ ಜವಾಬ್ದಾರಿ ವಹಿಸಿಕೊಂಡರು. ಈ ಅವಧಿಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟ ತೀವ್ರಗೊಂಡಿತ್ತು. ಈ ಸಂದರ್ಭದಲ್ಲೇ ಆಕೆಯ ಸಹೋದರ ಜಗನ್ ಕಾಂಗ್ರೆಸ್‌ನಿಂದ ಹೊರಬಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದ್ದರು. ಅವರೊಂದಿಗೆ 18 ಶಾಸಕರು ಬಂದು ಸೇರಿಕೊಂಡಿದ್ದಲ್ಲದೆ, ಕಾಂಗ್ರೆಸ್ ಸಂಸದರೊಬ್ಬರು ರಾಜೀನಾಮೆಯನ್ನೂ ನೀಡಿದ್ದರು. 2012 ರ ಅಕ್ಟೋಬರ್‌ನಲ್ಲಿ ಕಡಪಾ ಜಿಲ್ಲೆಯ ಇಡುಪುಲಪಾಯದಿಂದ 3,000 ಕಿ.ಮೀ ಪಾದಯಾತ್ರೆ ಆರಂಭಿಸಿದ ಶರ್ಮಿಳಾ ಅದನ್ನು ಆಗಸ್ಟ್ 2013 ರಲ್ಲಿ ಇಚ್ಚಾಪುರದಲ್ಲಿ ಪೂರ್ಣಗೊಳಿಸಿದರು.

ವೈ.ಎಸ್​,ವಿಜಯಮ್ಮ ಅವರ ಬೆಂಬಲ ಯಾರಿಗೆ? ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ರಾಜಶೇಖರ್​ ರೆಡ್ಡಿ ಪತ್ನಿ ವೈ.ಎಸ್​. ವಿಜಯಮ್ಮನವರ ಇಬ್ಬರು ಮಕ್ಕಳಾದ ಸಿಎಂ ಜಗನ್, ಶರ್ಮಿಳಾ ಇಬ್ಬರೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿಂದ ಶರ್ಮಿಳಾ ಮತ್ತು ಜಗನ್​ ಬೇರೆ ಬೇರೆಯಾಗಿದ್ದರು, ಜಗನ್ ಮೋಹನ್​ ರೆಡ್ಡಿ ಜೈಲಿಗೆ ಹೋದ ನಂತರ ಶರ್ಮಿಳಾ ತಾಯಿ ವಿಜಯಮ್ಮ ಜೊತೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದರು, ಜೊತೆಗೆ ಶರ್ಮಿಳಾ ಪರವಾಗಿ ತೆಲಂಗಾಣದಲ್ಲಿ ಪ್ರಚಾರ ಮಾಡಿದ್ದರು, ಈಗ ಮಗಳಾದ ಶರ್ಮಿಳಾ ಸ್ವತಂ ಅಣ್ಣನ ವಿರುದ್ಧ ಸಿಡಿದೆದ್ದು ಆಂಧ್ರಪ್ರದೇಶದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಇದೀಗ ತಾಯಿ ವಿಜಯಮ್ಮ ಮಗನ ಪರ ಅಥವಾ ಮಗಳ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ.

ಶರ್ಮಿಳಾ ಕಾಂಗ್ರೆಸ್​ ಪಕ್ಷ ಸೇರ್ಪಡೆ ನಂತರ ಆಂಧ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದೀಗ ಜಗನ್ ಮೋಹನ್​ ರೆಡ್ಡಿ ಸಂಪುಟದ ಪ್ರಭಾವಿ ನಾಯಕ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಹೇಳಿಕೆ ನೀಡಿದ್ದು ಶರ್ಮಿಳಾ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಮಾತ್ರಕ್ಕೆ ನಮ್ಮ ಕಾಲನ್ನು ನಾವು ಕತ್ತರಿಸಿಕೊಳ್ಳಲು ಆಗುತ್ತದೆಯೇ ? ನಮ್ಮ ವಿರುದ್ಧ ಯಾರೇ ಬಂದರು ಅವರನ್ನು ಪ್ರತಿಪಕ್ಷದ ನಾಯಕ ಎಂಬ ದೃಷ್ಟಿಕೋನದಿಂದ ಮಾತ್ರ ನೋಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್​ ನಾಯಕಿ ಸೋನಿಯಾಗಾಂಧಿ, ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯುಡು ಮನೆ ಒಡೆಯುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾಡಿದ್ದಾರೆ.

ಒಟ್ಟಾರೆಯಾಗಿ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಸಹೋದರಿ ವೈ.ಎಸ್​. ಶರ್ಮಿಳಾ ಇಂದು ಕಾಂಗ್ರೆಸ್​ ಸೇರ್ಪಡೆಯಾಗಿರುವುದು ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ. ಜಗನ್ ಮತ್ತು ತಾಯಿ ವಿಜಯಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕೂತೂಹಲ ಮೂಡಿಸಿದೆ.