ನ್ಯೂಸ್

ಆಸ್ತಿ ವ್ಯಾಜ್ಯಕ್ಕೆ ತಂಗಿಯನ್ನೇ ಹತ್ಯೆ ಮಾಡಿಸಿದ ಅಣ್ಣ: ಕೊಲೆಗೆ ಸಾಥ್ ನೀಡಿದ ಕುಟುಂಬ ಸದಸ್ಯರು

ಬೆಂಗಳೂರು: ಆಸ್ತಿ ಹಂಚಿಕೆ ವ್ಯಾಜ್ಯದಲ್ಲಿ ಅಣ್ಣನೇ ತಂಗಿಯನ್ನು ಹತ್ಯೆ ಮಾಡಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚಾಮರಾಜಪೇಟೆಯ ಸೋಮಿನಿ ಸತ್ಯಭಾಮ (೪೯) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್, ಆಕಾಶ್, ಶಿವಶಂಕರ್, ಪ್ರವೀಣ್, ಪೂಜಾ ಮತ್ತು ಗಾಯತ್ರಿಯನ್ನು ಬಂಧಿಸಲಾಗಿದೆ.
ವಿಂಡ್ಸರ್‌ಮ್ಯಾನರ್ ಸರ್ವೀಸ್ ರಸ್ತೆಯಲ್ಲಿ ಜೂ.೧೧ರಂದು ಸಂಜೆ ಸಾಗರ್ ಹಾಗೂ ಆಕಾಶ್, ಸತ್ಯಭಾಮ ಅವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು. ಕೊಲೆಯಾದ ಸತ್ಯಭಾಮ ಅವರ ಪುತ್ರ ಅನಿಲ್‌ಕುಮಾರ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ತನಿಖೆ ನಡೆಸಿ ಆಕಾಶ್, ದಿಲೀಪ್‌ನನ್ನು ಬಂಧಿಸಲಾಯಿತು. ಈ ಕೃತ್ಯಕ್ಕೆ ಶಿವಂಶಂಕರ್ ಸೇರಿ ಇಡೀ ಕುಟುಂಬ ಸಂಚು ರೂಪಿಸಿರುವುದು ಗೊತ್ತಾಗಿದ್ದರಿಂದ ಅವರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿ ವ್ಯಾಜ್ಯವೇ ಕೊಲೆಗೆ ಕಾರಣ:
ಸತ್ಯಭಾಮ ಹಾಗೂ ಶಿವಶಂಕರ್ ಒಡಹುಟ್ಟಿದವರು. ಚಾಮರಾಜಪೇಟೆಯಲ್ಲಿ ಪಿತ್ರಾರ್ಜಿತ ಆಸ್ತಿ ಇದೆ. ಅಲ್ಲದೇ ಹಲವು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಈ ಆಸ್ತಿಯಲ್ಲಿ ಸತ್ಯಭಾಮ ಹೆಚ್ಚಿನ ಪಾಲು ಪಡೆದಿದ್ದಾರೆ ಎಂದು ಶಿವಶಂಕರ್ ತಗಾದೆ ತೆಗೆದಿದ್ದರು. ಇದಕ್ಕೆ ಅವರ ಪತ್ನಿ ಮತ್ತು ಮಕ್ಕಳು ಕುಮ್ಮಕ್ಕು ನೀಡಿದ್ದರು. ಆಸ್ತಿ ಹಂಚಿಕೆ ವಿಚಾರವಾಗಿ ಸಿವಿಲ್ ಮೊಕದ್ದಮೆಗಳನ್ನು ಕೂಡ ದಾಖಲಿಸಲಾಗಿತ್ತು. ಆಸ್ತಿ ವಿಚಾರವಾಗಿಯೇ ಹಲವು ಸಲ ಅಣ್ಣ-ತಂಗಿ ಜಗಳವಾಡಿದ್ದರು. ಹೀಗಾಗಿ, ತಂಗಿ ಸತ್ಯಭಾಮ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಅವರು, ಹತ್ಯೆ ಮಾಡುವಂತೆ ತನ್ನ ಮಕ್ಕಳಿಗೆ ಸೂಚಿಸಿದ್ದ. ಇದಕ್ಕೆ ಸಂಬಂಧಿ ಆಕಾಶ್ ಕೂಡ ಸಹಕಾರ ನೀಡಿದ್ದ.

ಮಾರಕಾಸದಿಂದ ಹತ್ಯೆ:
ಸತ್ಯಭಾಮ ಅವರು ಐಟಿಸಿ ವಿಂಡ್ಸರ್‌ಮ್ಯಾನರ್ ಹೋಟೆಲ್‌ನಲ್ಲಿ ಸ್ಟ್ಾ ನರ್ಸ್ ಕೆಲಸ ಮಾಡುತ್ತಿದ್ದರು. ಅವರು ಜೂ.೧೧ರಂದು ಸಂಜೆ ಕೆಲಸ ಮುಗಿಸಿ ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಾಗರ್ ಹಾಗೂ ಆಕಾಶ್ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ್ದರು. ಸಾಗರ್ ಮಚ್ಚಿನಿಂದ ಸತ್ಯಭಾಮ ಅವರ ತಲೆ, ಮುಖಕ್ಕೆ ಹೊಡೆದಿದ್ದ. ಆಕಾಶ್ ಚಾಕುವಿನಿಂದ ಇರಿದಿದ್ದ. ಆನಂತರ ಅಲ್ಲಿಂದ ಪರಾರಿಯಾಗಿದ್ದರು. ಈ ಭೀಕರ ಕೃತ್ಯ ಕಂಡ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತ್ಯಭಾಮ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದರು. ಕೊಲೆ ದೃಶ್ಯಾವಳಿಯು ಹೋಟೆಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿಗಳಾದ ಶಿವಂಶಕರ್, ಗಾಯತ್ರಿದೇವಿ, ಪೂಜಾಳನ್ನು ಜೈಲಿಗೆ ಕಳುಹಿಸಲಾಗಿದೆ. ಸಾಗರ್, ದಿಲೀಪ್ ಆಕಾಶ್‌ನನ್ನು ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಮತ್ತು ಸ್ಥಳ ಮಹಜರು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.