ನವದೆಹಲಿ: ಯಾರು ಯಾರೊಂದಿಗೆ ವಿವಾಹವಾಗುತ್ತಾರೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದ ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ಬ್ರಿಟಿಷ್ ಮಹಿಳೆಯ ಹಣೆಯಲ್ಲಿ ಏನು ಬರೆದಿತ್ತೋ ಗೊತ್ತಲ್ಲ. ಸದ್ಯ ಈಕೆ ಹೊದ್ದುಕೊಳ್ಳುವ ಹೊದಿಕೆಯನ್ನೇ ವಿವಾಹವಾಗಿ ಎಲ್ಲರೂ ಗೊಂದಲಕ್ಕೊಳಗಾಗುವಂತೆ ಮಾಡಿದ್ದಾಳೆ.
ಪಾಸ್ಕೇಲ್ ಸೆಲ್ಲಿಕ್ ಎಂಬ ಬ್ರಿಟಿಷ್ ಮಹಿಳೆ, ತನ್ನ ಸಂಪ್ರದಾಯದಂತೆ ಹೊದಿಕೆಯೊಂದಿಗೆ ವಿವಾಹವಾಗಿದ್ದಾಳೆ. ಇದೀಗ ಈಕೆಯ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನು ನೋಡಿದ ಅನೇಕರು ಒಂದು ಕ್ಷಣ ಬೆರಗಾಗುವಂತಾಗಿದೆ.
ವಧು ಪಾಸ್ಕೇಲ್ ಸೆಲ್ಲಿಕ್ ಪಾಶ್ಚಾತ್ಯ ಶೈಲಿಯಲ್ಲಿ ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡಿದ್ದಾಳೆ. ಅಂತೆಯೇ ಹೊದಿಕೆಯನ್ನು ಅತ್ಯಾಕರ್ಷಕವಾಗಿ ಸಿಂಗರಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಇನ್ನು ಪಾಸ್ಕೇಲ್ ವಿವಾಹವಾಗಿರುವ ಹೊದಿಕೆಯಲ್ಲಿ "ಡುವೆಟ್, ನಾನು ನಿನ್ನನ್ನು ಪ್ರೀತಿಸುತ್ತೇನೆ," ಎಂದು ಬರೆದಿದೆ. ಅಂತಿಮವಾಗಿ ಪಾಸ್ಕೇಲ್ ಸೆಲ್ಲಿಕ್ ಹೊದಿಕೆಯೊಂದಿಗೆ ಉಂಗುರ ಬದಲಾಯಿಸಿಕೊಂಡು ವಿವಾಹವಾಗಿದ್ದಾಳೆ.
ವರದಿಯ ಪ್ರಕಾರ ಪಾಸ್ಕೇಲ್ ಸೆಲ್ಲಿಕ್ 2019ರಲ್ಲಿ ಪ್ರೇಮಿಗಳ ದಿನದಂದು ಮುಕ್ತ ವಿವಾಹವಾಗುವುದಾಗಿ ಹೇಳಿಕೊಂಡಿದ್ದಳಂತೆ. ಹೀಗಾಗಿ ವೃತ್ತಿಯಲ್ಲ ಕಲಾವಿದೆಯಾಗಿರುವ ಸೆಲ್ಲಿಕ್, ತನ್ನಿಚ್ಛೆಯಂತೆಯೇ ಮದುವೆಯಾಗಿದ್ದೇನೆ ಎಂದು ಸಂತಸದಲ್ಲಿದ್ದಾಳೆ. ಈಕೆಯ ಕುಟುಂಬಸ್ಥರು ಮದುವೆಗೆ ಬಂದು ನಿರ್ಧಾರವನ್ನು ಬೆಂಬಲಿಸಿದ್ದಾರೆ.
ವಿಶೇಷವೆಂದರೆ ಪಾಸ್ಕೇಲ್ ಸೆಲ್ಲಿಕ್ ಹೊದಿಕೆಯೊಂದಿಗಿನ ತನ್ನ ವಿವಾಹ ಕಾರ್ಯಕ್ರಮಕ್ಕೆ ಗೆಳೆಯ ಜಾನಿಯನ್ನು ಆಹ್ವಾನಿಸಿದ್ದಳು. ಗೆಳತಿಯ ಆಹ್ವಾನವನ್ನು ಸ್ವೀಕರಿಸಿ ಬಂದ ಜಾನಿ, ತನ್ನ ಗೆಳತಿಯ ನಡೆಯನ್ನು ಬೆಂಬಲಿಸಿದ್ದಾನೆ. ಹೊದಿಕೆಯೊಂದಿಗೆ ವಿವಾಹವಾಗಿದ್ದೇನೆಂದು ಜಾನಿ ನನ್ನ ಬಗ್ಗೆ ಅಸೂಯೆ ಪಟ್ಟುಕೊಂಡಿಲ್ಲ. ನನ್ನ ನಿರ್ಧಾರವನ್ನು ಅವನು ಹೆಮ್ಮೆಯಿಂದ ಸ್ವಾಗತಿಸಿದ್ದಾನೆ ಎಂದು ಪಾಸ್ಕೇಲ್ ಹೇಳಿಕೊಂಡಿದ್ದಾಳೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಸ್ಕೆಲ್ ಸೆಲ್ಲಿಕ್, ನನ್ನ ದುಃಖ ಮತ್ತು ಸಂತಸದ ಸಮಯದಲ್ಲಿ ಈ ಹೊದಿಕೆ ನನ್ನ ಜೊತೆಗಿರುತ್ತದೆ. ನನ್ನ ನಿರ್ಧಾರ ಲೈಂಗಿಕವಾಗಿಲ್ಲ. ಇದೊಂದು ಅತ್ಯಾಪ್ತ ಸ್ನೇಹ ಇದ್ದಂತೆ ಎಂದು ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್)