ನವದೆಹಲಿ: ಕೋವಿಶೀಲ್ಡ್ ಲಸಿಕೆಯನ್ನು ಕಾನೂನುಬದ್ಧ ಲಸಿಕೆಯೆಂದು ಪರಿಗಣಿಸದಿರುವ ಬ್ರಿಟನ್ ಸರ್ಕಾರದ ನಿರ್ಧಾರ ತಾರತಮ್ಯದಿಂದ ಕೂಡಿದ್ದಾಗಿದೆ ಎಂದು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಅದಕ್ಕೆ ತಕ್ಕ ಪ್ರತಿಕ್ರಮಗಳನ್ನು ಕೈಗೊಳ್ಳಬೇಕಾದೀತೆಂದು ಎಚ್ಚರಿಕೆ ನೀಡಿದೆ. ಬ್ರಿಟನ್ನ ಈ ಧೋರಣೆಯಿಂದಾಗಿ, ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರು ಬ್ರಿಟನ್ಗೆ ತೆರಳಲು ಅನನುಕೂಲ ಆಗಲಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಮಂಗಳವಾರ ಹೇಳಿದ್ದಾರೆ.
ಮಕ್ಕಳ ಕೊವ್ಯಾಕ್ಸಿನ್ ಪರೀಕ್ಷೆ ಪೂರ್ಣ: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಬಹುದಾದ ಕರೊನಾ ಲಸಿಕೆ ಕೊವ್ಯಾಕ್ಸಿನ್ನ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳನ್ನು ಸಾವಿರ ಮಕ್ಕಳ ಮೇಲೆ ಪೂರ್ಣಗೊಳಿಸಿರುವುದಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹೇಳಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಡೇಟಾವನ್ನು ಭಾರತೀಯ ಔಷಧಗಳ ಮಹಾ ನಿಯಂತ್ರಕರಿಗೆ (ಡಿಸಿಜಿಐ) ಮುಂದಿನ ವಾರ ಸಲ್ಲಿಸಲಾಗುವುದೆಂದು ಕಂಪನಿ ಸಿಎಂಡಿ ಕೃಷ್ಣ ಎಲಾ ಮಂಗಳವಾರ ಹೇಳಿದ್ದಾರೆ.
ಫೈಜರ್, ಮಾಡರ್ನಾ ಖರೀದಿಯಿಲ್ಲ: ದೇಶದಲ್ಲೇ ಕೈಗೆಟಕುವ ದರದಲ್ಲಿ ಲಸಿಕೆಗಳು ಸಿಗುತ್ತಿರುವುದರಿಂದ ಫೈಜರ್/ಬಯೋಎನ್ಟೆಕ್ ಮತ್ತು ಮಾಡರ್ನಾದ ಲಸಿಕೆಗಳನ್ನು ಖರೀದಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಸುಲಭವಾಗಿ ಸಂಗ್ರಹಿಸಿಡಬಹುದಾದ ಲಸಿಕೆ ಸಂಖ್ಯೆಯೂ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ಹೇಳಿದೆ.
26,115 ಕೇಸ್: ಮಂಗಳವಾರ ಬೆಳಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಕರೊನಾ ಸೋಂಕಿನ 2,115 ಹೊಸ ಪ್ರಕರಣಗಳು ದೃಢಪಟ್ಟಿವೆ. 252 ಮಂದಿ ಮೃತಪಟ್ಟಿದ್ದಾರೆ. ಕಳೆದ 184 ದಿನಗಳಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳು 3,09,575ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇ-ಸಂಜೀವಿನಿ ಅಳವಡಿಕೆ ರಾಜ್ಯ 2ನೇ ಸ್ಥಾನ: ಕೇಂದ್ರದ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯಾದ ಇ-ಸಂಜೀವಿನಿಯಿಂದ ದೇಶದಾದ್ಯಂತದ 1.20 ಕೋಟಿಗೂ ಅಧಿಕ ಜನರು ಸಮಾಲೋಚನೆಯ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕ ಸಹಿತ 10 ರಾಜ್ಯಗಳು ಗರಿಷ್ಠ ಲಾಭ ಪಡೆದಿವೆ ಎಂದು ಅದು ಹೇಳಿದೆ. ದೇಶದೆಲ್ಲೆಡೆ ಪ್ರತಿ ದಿನ ಸುಮಾರು 90,000 ರೋಗಿಗಳಿಗೆ ಇ-ಸಂಜೀವಿನಿ ಸೌಲಭ್ಯ ಒದಗಿಸಲಾಗುತ್ತಿದೆ. ಕರ್ನಾಟಕದಲ್ಲಿ 22,57,994 ಮಂದಿ ಇ-ಸಂಜೀವಿನಿ ಅಳವಡಿಸಿಕೊಂಡಿದ್ದು, ಈ-ಸಂಜೀವಿನಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿ ಇದೆ. ಮಹಾರಾಷ್ಟ್ರ ಸಹಿತ ಭಾರತದಲ್ಲಿ ಡೆಲ್ಟಾ ಪ್ರಭೇದದ ಹಾವಳಿ ಮುಂದುವರಿದಿದೆ. ಅದರ ಎವೈ.4 ಉಪಪ್ರಭೇದದ ಅಸ್ತಿತ್ವ ಹೆಚ್ಚುತ್ತಿದೆ. ಅದು ಅಷ್ಟು ಕಳವಳಕಾರಿ ಯಾದುದಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಆರೋಗ್ಯ ಮಂತ್ರಿ ಮೇಲೆ ಹಲ್ಲೆ!
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಸ್ಥಿತಿಗತಿ ಅರಿಯಲು ಸಾಮಾನ್ಯರಂತೆ ಹೋಗಿದ್ದ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯರ ಮೇಲೆ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ತಾವು ಒಬ್ಬ ಸಾಮಾನ್ಯ ರೋಗಿಯಂತೆ ಆಸ್ಪತ್ರೆಗೆ ಹೋಗಿದ್ದಾಗ ಈ ಘಟನೆ ನಡೆದಿತ್ತು ಎಂದು ಮಂಗಳವಾರ ಸಫ್ದರ್ಜಂಗ್ ಆಸ್ಪತ್ರೆಯ ನಾಲ್ಕು ಆರೋಗ್ಯ ಘಟಕಗಳ ಉದ್ಘಾಟನೆ ವೇಳೆ ಮಾಂಡವೀಯ ಸ್ವತ ಹೇಳಿದ್ದಾರೆ. ತನ್ನ ಮಗನಿಗಾಗಿ ಸ್ಟ್ರೆಚರ್ ಪಡೆಯಲು 75 ವರ್ಷದ ಮಹಿಳೆಯೊಬ್ಬರು ಗಾರ್ಡ್ಗಳೊಂದಿಗೆ ಎಷ್ಟೇ ಗೋಗರೆದರೂ ಪ್ರಯೋಜನವಾಗದ್ದನ್ನು ಸಚಿವರು ಗಮನಿಸಿದ್ದರು. ಇದರಿಂದ ಅಸಮಾಧಾನಗೊಂಡ ಮಾಂಡವೀಯ, ಆಸ್ಪತ್ರೆಯಲ್ಲಿ 1,500 ಭದ್ರತಾ ಸಿಬ್ಬಂದಿ ಇದ್ದರೂ ಹೀಗೇಕೆಂದು ಆ ಗಾರ್ಡ್ಗೆ ಪ್ರಶ್ನಿಸಿದಾಗ ಸಾಮಾನ್ಯನಂತೆ ಇದ್ದ ಮಂತ್ರಿ ಮೇಲೆ ಆತ ಹಲ್ಲೆ ಮಾಡಿದ್ದ.
ಲಸಿಕೆ ಪಡೆದವರಿಗೆ ಅಮೆರಿಕ ಪ್ರವೇಶ ಅನುಮತಿ: ಭಾರತೀಯರ ಸಹಿತ ಸಂಪೂರ್ಣ ಲಸಿಕೆ ಪಡೆದ 33 ದೇಶಗಳ ಜನರಿಗೆ ದೇಶದೊಳಗೆ ಪ್ರವೇಶಿಸಲು ನವೆಂಬರ್ನಿಂದ ಅನುಮತಿ ನೀಡಲು ಅಮೆರಿಕ ನಿರ್ಧರಿಸಿದೆ. ಚೀನಾ, ಬ್ರೆಜಿಲ್, ಯುರೋಪ್ನ ಬಹುತೇಕ ದೇಶಗಳ ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದೆಂದು ಶ್ವೇತ ಭವನ ತಿಳಿಸಿದೆ.
ಭಾರತ ಪ್ರವಾಸದ ವೇಳೆ ‘ಹವಾನಾ ಸಿಂಡ್ರೋಮ್!: ಭಾರತ ಪ್ರವಾಸದ ಸಂದರ್ಭದಲ್ಲಿ ‘ಹವಾನಾ ಸಿಂಡ್ರೋಮ್ ಕಾಣಿಸಿಕೊಂಡಿತ್ತು ಎಂದು ಸಿಐಎ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಹೇಳಿದ್ದಾಗಿ ವರದಿ ಆಗಿದೆ. ಸಿಐಎ ಮುಖ್ಯಸ್ಥ ವಿಲಿಯಂ ಬರ್ನ್ಸ್ ಜತೆಗೆ ಭಾರತಕ್ಕೆ ಬಂದ 200 ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರು ಈ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಹವಾನಾ ಸಿಂಡ್ರೋಮ್ ಎಂಬುದು ನಿಗೂಢ ಅನಾರೋಗ್ಯ ಸಮಸ್ಯೆಯಾಗಿದ್ದು ಮೈಗ್ರೇನ್, ವಾಕರಿಗೆ, ತಲೆಸುತ್ತು ಮತ್ತು ಮರೆವು ಕಾಣಿಸಿಕೊಳ್ಳುವಂಥದ್ದು. 2016ರಲ್ಲಿ ಹವಾನಾ ಸಿಂಡ್ರೋಮ್ ಅಮೆರಿಕದ ಅಧಿಕಾರಿಗಳಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿತ್ತು.