ನ್ಯೂಸ್

ಶೋಷಿತರನ್ನು ಒಟ್ಟಿಗೆ ಕೊಂಡೊಯ್ಯುವುದು ಬಿಜೆಪಿ ಬದ್ಧತೆ: ಛಲವಾದಿ ನಾರಾಯಣಸ್ವಾಮಿ ಹೇಳಿಕೆ | Congress pleasing politics

ಮೃತ್ಯುಂಜಯ ಕಪಗಲ್

ಬೆಂಗಳೂರು: ಸ್ವಚ್ಛ ಭಾರತ ಕಾರ್ಯಕ್ರಮ, ಪೌರ ಕಾರ್ಮಿಕರ ಪಾದಪೂಜೆ ಮತ್ತಿತರ ಚಟುವಟಿಕೆಗಳು ತೋರಿಕೆ ಅಥವಾ ಕಾಂಗ್ರೆಸ್‌ನಂತೆ ಓಲೈಕೆಗೂ ಅಲ್ಲ. ತಳಸಮುದಾಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿಯಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಗಣರಾಜ್ಯೋತ್ಸವ ನಿಮಿತ್ತ ಬಿಜೆಪಿ ರಾಜ್ಯ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರು ಭಾನುವಾರ ರಾಷ್ಟ್ರ ಧ್ಜಜಾರೋಹಣ ಮಾಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.

ಎಲ್ಲರನ್ನು ಒಳಗೊಂಡ ವಿಕಾಸದ ಉದ್ದೇಶವು ಕೂಡ ಪ್ರತಿಯೊಬ್ಬ ನಾಗರಿಕನ ಏಳ್ಗೆಯೊಂದಿಗೆ ಬಲಿಷ್ಠ ಭಾರತ ಕಟ್ಟಬೇಕು ಎನ್ನುವುದಾಗಿದೆ. ದಮನಿತರನ್ನು ಒಟ್ಟಿಗೆ ಕೊಂಡೊಯ್ಯುವುದಕ್ಕೆ ಬಿಜೆಪಿ ಸದಾ ಬದ್ಧವಾಗಿದೆ ಎಂದರು.

ದಲಿತರ ಉದ್ಧಾರವಾಗಲಿಲ್ಲ

ಡಾ.ಬಿ.ಆರ್.ಅಂಬೇಡ್ಕರ್ ನೀತಿ-ಸಿದ್ಧಾಂತಗಳ ನೈಜ ಪಾಲಕರು ಹಾಗೂ ಅನುಷ್ಠಾನಕ್ಕೆ ತಂದವರು ಕೂಡ ಮೋದಿಯವರಾಗಿದ್ದಾರೆ. ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರ ಗಳಿಸಿತೇ ಹೊರತು, ದಲಿತರನ್ನು ಉದ್ಧರಿಸಲಿಲ್ಲ.

ಕಾಂಗ್ರೆಸ್‌ನವರು ಹೇಳಿದಂತೆ ಮಾಡಿದ್ದರೆ ಶೋಷಿತ ಸಮುದಾಯಗಳೆಲ್ಲ ಮುಖ್ಯವಾಹಿನಿಗೆ ಬಂದು ವರ್ಷಗಳೇ ಕಳೆಯುತ್ತಿದ್ದವು. ಕಾಂಗ್ರೆಸ್‌ನ ತೋರಿಕೆಯ ಪ್ರೀತಿ, ಓಲೈಕೆಯನ್ನು ತಳಸಮುದಾಯಗಳು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಸಲಹೆ ನೀಡಿದರು.

ಭೀಮಶಕ್ತಿ ಸಂಗಮ

ಇದೇ ಸಂದರ್ಭದಲ್ಲಿ ಪಕ್ಷದ ‘ಭೀಮ ಶಕ್ತಿ ಸಂಗಮ’ ಅಭಿಯಾನದ ನಿಮಿತ್ತ ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಪೌರ ಕಾರ್ಮಿಕರ ಜತೆಗೂಡಿ ಪಕ್ಷದ ಮುಖಂಡರು ಲಘು ಉಪಾಹಾರ ಮಾಡಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಎಸ್.ಹರೀಶ್ , ಮುಖಂಡರು, ಕಾರ್ಯಕರ್ತರು ಇದ್ದರು.