ಬೇಲೂರು ತಾಲೂಕಿನ ಮಲ್ಲನಹಳ್ಳಿ ಗ್ರಾಮದ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಪರ್ವತಯ್ಯ, ಹೆಬ್ಬಾಳು ಹಾಲಪ್ಪ, ಗಿರೀಶ್, ಧ್ರುವಕುಮಾರಿ, ಗೋಪಾಲ, ಪ್ರತಿಭಾ, ದೇವರಾಜ್, ಜಗದೀಶ್ ಇತರರಿದ್ದರು. 
ನ್ಯೂಸ್

ಅನುದಾನ ತಂದು ಟೀಕಾಕಾರರಿಗೆ ಉತ್ತರ ನೀಡುವೆ

ಬೇಲೂರು: ಶಾಸಕರು ಯಾವುದೇ ಅನುದಾನ ತಾರದೆ ಸಣ್ಣಪುಟ್ಟ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸುತ್ತಿದ್ದಾರೆಂದು ಟೀಕಿಸುವ ವಿರೋಧ ಪಕ್ಷದವರಿಗೆ ಸಧ್ಯದಲ್ಲೇ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಮೂಲಕ ಉತ್ತರ ಕೊಡುತ್ತೇನೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಮಲ್ಲನಹಳ್ಳಿ ಗ್ರಾಮದ ಸಮೀಪ 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಗಟ್ಟಿಯಾಗಿಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕ್ಷೇತ್ರಕ್ಕೂ ಅನುದಾನ ನೀಡುತ್ತಿಲ್ಲವೆಂಬುದು ವಿರೋಧ ಪಕ್ಷದ ನಾಯಕರಿಗೆ ತಿಳಿದಿದ್ದರೂ ಬೇಕಂತಲೇ ಮಾತನಾಡುತ್ತಾರೆ. ಆದರೆ ಅವರಿಗೆ ಸಧ್ಯದಲ್ಲೇ ಅನುದಾನ ತಂದು ಕೆಲಸ ಮಾಡಿಸಿದ ನಂತರ ಮಾತನಾಡುತ್ತೇನೆ. ಅಲ್ಲದೆ ಬಹು ಬೇಡಿಕೆಯ ಹೆಬ್ಬಾಳು-ಮಲ್ಲನಹಳ್ಳಿ ರಸ್ತೆ ಅಭಿವೃದ್ಧಿಗೆ 1.95 ಕೋಟಿ ರೂ. ಬಿಡುಗಡೆಯಾಗಿದ್ದು ಕೆಲಸ ಪ್ರಾರಂಭಿಸಲಾಗುತ್ತಿದೆ. ಜತೆಗೆ ಮಲ್ಲನಹಳ್ಳಿ ಗಡಿಯಿಂದ ಮುತ್ತುಗನ್ನೆ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೂ ಹಣ ಬಿಡುಗಡೆಯಾಗಿದ್ದು. ಶೀಘ್ರವೇ ಭೂಮಿಪೂಜೆ ನಡೆಸಲಾಗುವುದು. ಅಲ್ಲದೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೂರಾರು ಭಾರಿ ಅರ್ಜಿ ಸಲ್ಲಿಸಿ ಅಲೆದಾಡಿದ್ದರಿಂದ ಸಚಿವರು ಹೊಳೆಬೀದಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ 35 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಹೆಬ್ಬಾಳು ಗ್ರಾಮದ ಸಮುದಾಯ ಭವನಕ್ಕೆ ಹಣ ಹಾಗೂ ಚನ್ನಬಸವೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ ಮತ್ತು ವೈಯಕ್ತಿಯವಾಗಿ ದೇಣಿಗೆ ನೀಡಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಗ್ರಾಪಂ ಸದಸ್ಯರಾದ ಗಿರೀಶ್, ಧ್ರುವಕುಮಾರಿ, ಗೋಪಾಲ, ಪ್ರತಿಭಾ, ದೇವರಾಜ್, ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ಲೋಕೋಪಯೋಗಿ ಇಲಾಖೆ ಎಇಇ ದಯಾನಂದ್, ಎಇ ಮಹೇಶ್ ಸೇರಿದಂತೆ ಇತರರಿದ್ದರು.