ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಏರ್ಪಡಿಸಲಾಗಿದ್ದ ಅಂಗವಿಕಲ ಮಕ್ಕಳ ಕ್ರೀಡಾಕೂಟ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮವನ್ನು ಎಸ್.ಬಿ.ಪುಟ್ಟರಾಜು ಉದ್ಘಾಟಿಸಿದರು. ಪ್ರದೀಪ್, ಸೋಮಶೇಖರ್, ಕವಿತಾ, ನಾಗೇಶ್, ನಟರಾಜ್, ಲಿಲ್ಲಿ ಮೇರಿ ಇತರರಿದ್ದರು.  
ನ್ಯೂಸ್

ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ

ರಾವಂದೂರು : ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಕರು ಮತ್ತು ಪಾಲಕರ ಸಹಕಾರ ಬಹಳ ಅಗತ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಕಲಚೇತನ ಮಕ್ಕಳ ತಾಲೂಕು ಅಧಿಕಾರಿ ಎಸ್.ಬಿ.ಪುಟ್ಟರಾಜು ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಏರ್ಪಡಿಸಲಾಗಿದ್ದ ಅಂಗವಿಕಲ ಮಕ್ಕಳ ಕ್ರೀಡಾಕೂಟ ಮತ್ತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲ ಮಕ್ಕಳಿಗೆ ವಿಶೇಷ ಪೌಷ್ಟಿಕ ಆಹಾರಗಳನ್ನು ನೀಡುವುದರ ಜತೆಗೆ ಅವರ ಆರೋಗ್ಯ ಮತ್ತು ಶಿಕ್ಷಣದ ಕಡೆ ಹೆಚ್ಚು ಗಮನಹರಿಸಬೇಕು. ಅಂಗವಿಕಲ ಮಕ್ಕಳ ಮೇಲೆ ಅನುಕಂಪಕ್ಕಿಂತಲೂ ಅವರನ್ನು ನಮ್ಮ ಸಮಾಜದ ಮುಖ್ಯವಾಹಿನಿಗೆ ತರಲು ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಅಂಗವಿಕಲ ಮಕ್ಕಳನ್ನು ಯಾವುದೇ ರೀತಿ ದಾಸ್ಯ ಮನೋಭಾವದಿಂದ ಕಾಣದೆ ಅವರನ್ನು ಎಲ್ಲರಂತೆ ಕಂಡಾಗ ಅವರಲ್ಲೂ ಉತ್ಸಾಹ ಮೂಡುತ್ತದೆ. ಅವರಲ್ಲೂ ಒಂದೊಂದು ಸೂಕ್ತ ಪ್ರತಿಭೆ ಇದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಸಹ ಸಮಾಜದ ಆದರ್ಶ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಪ್ರದೀಪ್ ಮಾತನಾಡಿ, ಅಂಗವಿಕಲ ಮಕ್ಕಳಿಗೆ ಸಮತೋಲನ ಆಹಾರ ಬಹಳ ಮುಖ್ಯ. ಸ್ಥಳೀಯವಾಗಿ ಸಿಗುವ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡುವುದರ ಮೂಲಕ ಅವರು ಸದೃಢ ಮಕ್ಕಳಾಗಲು ಸಾಧ್ಯವಾಗುತ್ತದೆ. ಮಕ್ಕಳಿಗೆ ವೃತ್ತಿ ಕೌಶಲಗಳನ್ನು ನೀಡುವುದರ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಹಕಾರವಾಗುತ್ತದೆ. ಅಂಗವಿಕಲ ಮಕ್ಕಳಿಗೆ ಸರ್ಕಾರ ಹಲವಾರು ಯೋಜನೆ ರೂಪಿಸಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಂಗವಿಕಲ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಮತ್ತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ಸಿಆರ್‌ಪಿಗಳಾದ ಸೋಮಶೇಖರ್, ಕವಿತಾ, ನಾಗೇಶ್, ನಟರಾಜ್, ಮುಖ್ಯ ಶಿಕ್ಷಕಿ ಲಿಲ್ಲಿ ಮೇರಿ ಸೇರಿದಂತೆ ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಹಾಜರಿದ್ದರು.