ಸಾಂದರ್ಭಿಕ ಚಿತ್ರ 
ನ್ಯೂಸ್

ವರನ ಕೈಯಲ್ಲಿದ್ದ: ತಾಳಿ ಕಸಿದುಕೊಂಡು ದೇವರ ಹುಂಡಿಗೆ ಎಸೆಯಲೆತ್ನಿಸಿದ ವಧು..!

ರಾಮನಾಥಪುರಂ: ಮದುವೆಯಾಗಲು ಇಷ್ಟಪಡದ ಯುವತಿ ಕೊರಳಿಗೆ ಮೂರು ಗಂಟು ಹಾಕಲು ಸಿದ್ಧವಾಗಿದ್ದ ವರನ ಕೈಯಿಂದ ಮಂಗಳಸೂತ್ರ ಕಿತ್ತುಕೊಂಡು ದೇವರ ಹುಂಡಿಗೆ ಹಾಕಲು ಯತ್ನಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂ ಬಳಿ ನಡೆದಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದ ವರ ಸೇರಿದಂತೆ ಮದುವೆಗೆ ಬಂದಿದ್ದವರೆಲ್ಲರೂ ಬೆಚ್ಚಿಬಿದ್ದಿದ್ದು, ತಿರುವಡನೈ ಸಮೀಪದ ಗ್ರಾಮದ ಯುವಕ (29) ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲ ತಿಂಗಳ ಹಿಂದೆ ತನ್ನ ಊರಿಗೆ ಬಂದಿದ್ದ ಆತ ತನ್ನ ನೆರೆಮನೆಯ 21 ವರ್ಷದ ಯುವತಿಯನ್ನು ಮದುವೆಯಾಗಲು ಬಯಸಿದ್ದು, ಹಿರಿಯರ ಸಮ್ಮುಖದಲ್ಲಿ ಸೋಮವಾರದಂದು ಈ ಮದುವೆಯನ್ನು ನಿಶ್ಚಯಿಸಲಾಗಿತ್ತು.

ಅದರಂತೆ ತಿರುವಡನೈನ ದೇವಸ್ಥಾನವೊಂದರಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ವಧು-ವರರ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ದೇವಸ್ಥಾನಕ್ಕೆ ಆಗಮಿಸಿದ್ದರು. ನಂತರ ಇಬ್ಬರು ಮದುವೆ ರಿಜಿಸ್ಟರ್‌ಗೆ ಸಹಿ ಹಾಕಿ ಹೂ ವಿನಿಮಯ ಮಾಡಿಕೊಂಡಿದ್ದಾರೆ. ಇನ್ನೇನು ಮದುವೆ ನಡೆಯಿತು ಎನ್ನುವಷ್ಟರಲ್ಲಿ ಯುವತಿಯು ಎಲ್ಲರಿಗೂ ಶಾಕ್​ ನೀಡಿದ್ದಾಳೆ.

ವಧುವಿನ ಕೊರಳಿಗೆ ತಾಳಿ ಕಟ್ಟಲು ಮುಂದಾಗಿದ್ದ ಯುವಕನ ಕೈಯಲ್ಲಿದ್ದ ಮಾಂಗಲ್ಯವನ್ನು ಕಿತ್ತುಕೊಂಡು ಮದುವೆ ಬೇಡ ಎಂದು ಹೇಳಿ, ದೇವರ ಹುಂಡಿಯಲ್ಲಿ ಅದನ್ನು ಹಾಕಲು ಯತ್ನಿಸಿದ್ದಾಳೆ. ಈ ದಿಢೀರ್ ಘಟನೆಯಿಂದ ವರ ಸೇರಿದಂತೆ ಸಂಬಂಧಿಕರು ಆಘಾತಕ್ಕೊಳಗಾಗಿದ್ದು, ಆಕೆಗೆ ಬುದ್ದಿ ಹೇಳಲು ಯತ್ನಿಸಿದರು. ಆದರೆ ವಧು, ಮಾತ್ರ ತನ್ನ ನಿರ್ಧಾರ ಬದಲಿಸದೇ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದ್ದಾಳೆ.

ಕೊನೆಗೆ ವರನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ಮಧ್ಯ ಪ್ರವೇಶಿಸಿ ಯುವತಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಈ ವೇಳೆ ಆಕೆ, ಪೋಷಕರ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿಗೆ ಸೂಚಿಸಿದ್ದಾಗಿಯೂ, ತನಗೆ ಈ ಮದುವೆ ಬೇಡ ಎಂದಿದ್ದಾಳೆ. ಇತ್ತ, ವಧುವಿಗೆ ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿದ ವರನ ಮನೆಯವರು ಹತಾಶೆಯಿಂದ ಮದುವೆ ಮಂಟಪದಿಂದ ಹೊರನಡೆದಿದ್ದಾರೆ.(ಏಜೆನ್ಸೀಸ್)