ನ್ಯೂಸ್

ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಕೋರ ವೈದ್ಯ!

ಚಿಕ್ಕಮಾಳಿಗೆ ಕೊಳ್ಳೇಗಾಲ: ಬಡವರ ಪಾಲಿಗೆ ಬಂಧು ಆಗಬೇಕಿರುವ ಸರ್ಕಾರಿ ಆಸ್ಪತ್ರೆಯೊಂದು ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತೆ ಹಣ ಪೀಕುತ್ತಿದೆ. ಉಚಿತ ಆರೋಗ್ಯ ಸೇವೆ ನೀಡಿ ರೋಗಿಗಳ ಪಾಲಿಗೆ ದೇವರಾಗಿ ಜೀವ ಉಳಿಸಬೇಕಾದ ವೈದ್ಯನೊಬ್ಬ ಲಂಚಕೋರನಾಗಿ ರಕ್ತ ಹೀರುತ್ತಿದ್ದಾನೆ!

ಇದು ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಕರ್ಮಕಾಂಡ. ಸೇವೆ ಹೆಸರಲ್ಲಿ ಲೂಟಿಗಿಳಿದಿರುವ ಆ ಅ ಪ್ರಾಮಾಣಿಕ ವೈದ್ಯನೇ ಡಾ.ನಾರಾಯಣ್. ಈತ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ ಬಾಣಂತಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಲು ಸಂಜೆ ತೆರೆಯುವ ತನ್ನ ಖಾಸಗಿ ಕ್ಲಿನಿಕ್​ಗೆ ಸಂಬಂಧಿಕರನ್ನು ಕರೆಸಿಕೊಂಡು ಹಣದ ಬೇಡಿಕೆ ಇಟ್ಟು, ಜೇಬಿಗಿಳಿಸುತ್ತಿರುವ ಲಂಚಾವತಾರ ವಿಜಯವಾಣಿ ನಡೆಸಿರುವ ‘ಸ್ಟಿಂಗ್ ಆಪರೇಷನ್’ನಲ್ಲಿ ಬಯಲಾಗಿದೆ.

ಬಯಲಾಗಿದೆ ಭ್ರಷ್ಟಾಚಾರ: ಡಾ.ನಾರಾಯಣ್ ಲಂಚದಾಟದಲ್ಲಿ ಸಿಬ್ಬಂದಿಯೂ ಭಾಗಿಯಾಗಿ ಬಡಜನರ ಬಳಿ 5ರಿಂದ 7 ಸಾವಿರ ರೂ. ಪಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಈ ಭ್ರಷ್ಟಾಚಾರದ ಸಂಪೂರ್ಣ ಚರಿತ್ರೆ ಮೇ 16ರಂದು ಬೆಳಕವಾಡಿಯ ಹೆರಿಗೆ ಪ್ರಕರಣದಿಂದ ಬಯಲಾಗಿದೆ. ಮಂಡ್ಯ ಜಿಲ್ಲೆಯ ಬೆಳಕವಾಡಿ ಗ್ರಾಮದ ನಿವಾಸಿ ಮಹದೇವ ಎಂಬುವರ ಪುತ್ರಿ ರೋಜಾ ಅವರನ್ನು ಮೇ 11ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಜೇರಿಯನ್ ಆಗಿ ಹೆಣ್ಣು ಮಗು ಜನಿಸಿತು. ಖುಷಿಯಲ್ಲಿದ್ದ ರೋಜಾ ಕಡೆಯವರಿಗೆ ಡಾ.ನಾರಾಯಣ್ ಬಾಣಂತಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಿಸಲು 5 ಸಾವಿರ ರೂ. ಕೊಡಲೇಬೇಕೆಂದು ಬೇಡಿಕೆ ಇಟ್ಟ. ಬಡತನದಲ್ಲಿದ್ದ ಬಾಣಂತಿ ತಂದೆ 2 ಸಾವಿರ ರೂ. ಹೊಂದಿಸಿಕೊಂಡು ವೈದ್ಯರು ಮಧ್ಯಾಹ್ನದ ನಂತರ ಕಾರ್ಯನಿರ್ವಹಿಸುವ ಖಾಸಗಿ ಕ್ಲಿನಿಕ್​ಗೆ ತೆರಳಿ ಲಂಚ ನೀಡಿದ್ದಾರೆ. ಈ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿವೆ.

ಇನ್ನೂ ಇವೆ ದಾಖಲೆ: ಇದೇ ವೈದ್ಯ ಏ.18ರಂದು ಬಸ್ತಿಪುರದ ನಟರಾಜು-ಲಾವಣ್ಯ ದಂಪತಿಗೆ ಜನಿಸಿದ ಗಂಡು ಮಗು ಮತ್ತು ಬಾಣಂತಿ ಬಿಡುಗಡೆ ಮಾಡಲೂ ಹಣದ ಬೇಡಿಕೆಯಿಟ್ಟಿದ್ದ ದಾಖಲೆಗಳು ವಿಜಯವಾಣಿಗೆ ಸಿಕ್ಕಿವೆ. ಕರೊನಾ ಹರಡುವಿಕೆ ಸಂದರ್ಭದಲ್ಲಿ ವೈದ್ಯರು ಅನನ್ಯ ಸೇವೆಯ ಮೌಲ್ಯ ತಿಳಿಸಿ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕುಲದ ಮೇಲಿನ ಗೌರವವನ್ನು ಎತ್ತರಕ್ಕೇರಿಸುತ್ತಿದ್ದಾರೆ. ಅಂಥವರ ಹೆಸರಿಗೆ ಡಾ.ನಾರಾಯಣ್ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯ ಉನ್ನತಾಧಿಕಾರಿಗಳಿಗೆ ಈತನ ಲಂಚಾವತಾರಗಳ ಬಗ್ಗೆ ತಿಳಿದಿದ್ದರೂ ಸುಮ್ಮನಿದ್ದಾರೋ ಅಥವಾ ಲಂಚ ಹಂಚಿಕೆ ಮಾಡಿಕೊಳ್ಳುತ್ತಿದ್ದರೋ ಎನ್ನುವ ಪ್ರಶ್ನೆ ಕಾಡುತ್ತಿದೆ.

ಸಾರ್ವಜನಿಕರ ಬಳಿ ಲಂಚ ಪಡೆಯುವ ಸರ್ಕಾರಿ ಅಧಿಕಾರಿಗಳನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ಬಂದವರಿಂದ ಹಣ ಪಡೆದಿರುವ ಕುರಿತು ಪರಿಶೀಲಿಸಿ ವೈದ್ಯನ ವಿರುದ್ಧ ಕ್ರಮಕೈಗೊಳ್ಳಲಾಗುವುದು. | ಡಾ.ಎಂ.ಆರ್. ರವಿ  ಜಿಲ್ಲಾಧಿಕಾರಿ, ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಒದಗಿಸದೆ ರೋಗಿಗಳು ಮತ್ತು ಅವರ ಕಡೆಯವರ ಬಳಿ ಹಣ ಪಡೆಯುವುದು ತಪ್ಪು. ದಾಖಲೆ ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ವೈದ್ಯರನ್ನು ಶಿಕ್ಷೆಗೆ ಗುರಿಪಡಿಸಲು ಶಿಫಾರಸು ಮಾಡುತ್ತೇನೆ. | ಡಾ.ಎಂ.ಸಿ.ರವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಮರ್ಯಾದೆ ತೆಗಿಬೇಡಿ ಪ್ಲೀಸ್...

ತನ್ನ ಕ್ಲಿನಿಕ್​ನಲ್ಲಿ ಲಂಚ ಪಡೆಯುವ ವೇಳೆ ‘ವಿಜಯವಾಣಿ’ ಸ್ಟಿಂಗ್ ಆಪರೇಷನ್ ನಡೆಸುತ್ತಿರುವುದನ್ನು ಅರಿತುಕೊಂಡ ಡಾ.ನಾರಾಯಣ್ ನಾನೊಬ್ಬ ಮಾನವಂತ. ಮರ್ಯಾದೆ ಕಳೆಯಬೇಡಿ ಎಂದು ಬೇಡಿಕೊಂಡಿದ್ದಾರೆ. ರೋಗಿಗಳಿಗೆ ಉಚಿತ ಸೇವೆ ನೀಡಬೇಕಾದವರು ಲಂಚ ಪಡೆಯುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಇನ್ನುಮುಂದೆ ಈ ರೀತಿ ತಪ್ಪು ಮಾಡುವುದಿಲ್ಲ. ನಿಮ್ಮಿಂದ ಒಂದೊಳ್ಳೆಯ ಪಾಠ ಕಲಿತಿದ್ದೇನೆ. ಈ ವಿಚಾರ ಎಲ್ಲಿಯೂ ಹೇಳಬೇಡಿ. ನೀವು ಬಯಸಿದ್ದನ್ನು ಫುಲ್​ಫಿಲ್ ಮಾಡಲು ಸಿದ್ಧನಿದ್ದೇನೆ ಎಂದು ಲಂಚದ ಆಮಿಷವೊಡ್ಡಿದರು. ಡಿಸ್ಚಾರ್ಜ್ ಮಾಡಿಸಲು ಲಂಚ ಕೊಟ್ಟಿದ್ದವರನ್ನು ಕರೆಸಿ ಅವರಿಗೆ ಹಣ ಹಿಂದಿರುಗಿಸಿದರು. ಇವೆಲ್ಲವೂ ಮೊಬೈಲ್​ನಲ್ಲಿ ಸೆರೆಯಾಗುತ್ತಿರುವುದು ತಿಳಿಯುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರು.