ನ್ಯೂಸ್

ದೇಗುಲಗಳ ತೆರವಿಗೆ ಬ್ರೇಕ್: ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ

ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ದೇವಾಲಯಗಳನ್ನು ಮಾತ್ರವೇ ತೆರವು ಮಾಡಲಾಗುತ್ತಿದೆ ಎಂಬ ಜನಾಕ್ರೋಶದ ಅಲೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವ ತನಕ ಏಕಾಏಕಿ ತೆರವು ಕಾರ್ಯಾಚರಣೆ ಕೈಗೊಳ್ಳದಂತೆ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ತೀರ್ವನಿಸಿದೆ. ದೇವಸ್ಥಾನಗಳ ಏಕಾಏಕಿ ತೆರವಿನಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆ ನಾನೇ ಮಾತುಕತೆ ನಡೆಸುತ್ತೇನೆ. ಜನರ ಭಾವನೆಗಳಿಗೆ ಧಕ್ಕೆ ತಂದು ದೇವಾಲಯಗಳನ್ನು ತೆರವುಗೊಳಿಸಬಾರದೆಂದು ಕಂದಾಯ ಸಚಿವ ಆರ್. ಅಶೋಕ್ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಆಕ್ರೋಶ ಬೇಡ: ಹುಣಸೂರಿನಲ್ಲಿ ಪುರಾತನ ದೇವಾಲಯವನ್ನು ಜಿಲ್ಲಾಡಳಿತ ತೆರವುಗೊಳಿಸಿ ರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ತಹಸೀಲ್ದಾರ್ ಜತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಜನರು ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದರು.

ಸರ್ಕಾರ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಲಿದೆ. ನಮಗೆ ಯಾರೂ ಮೇಲು, ಕೀಳು ಎಂಬ ಭಾವನೆ ಇಲ್ಲ. ದೇವಾಲಯ ಸೇರಿದಂತೆ ಎಲ್ಲ ಮಂದಿರಗಳ ಜತೆ ಪ್ರತಿಯೊಬ್ಬರೂ ದೈವ ಭಕ್ತಿ ಇಟ್ಟುಕೊಂಡಿರುತ್ತಾರೆ. ಏಕಾಏಕಿ ತೆರವುಗೊಳಿಸಿದರೆ ಸಹಜವಾಗಿ ಅವರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದರು. ಹುಣಸೂರಿನಲ್ಲಿ ದೇವಾಲಯವನ್ನು ತೆರವುಗೊಳಿಸಲು ಸೂಚನೆ ನೀಡಿದ್ದ ಸ್ಥಳೀಯ ತಹಸೀಲ್ದಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ, ಸಂಬಂಧಪಟ್ಟವರ ಜತೆ ರ್ಚಚಿಸಿ ಕ್ರಮ ಕೈಗೊಳ್ಳುತ್ತೇನೆಂದರು.

2009ರ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಡಿ ಮೈಸೂರು ಜಿಲ್ಲಾಡಳಿತ 90ಕ್ಕೂ ಹೆಚ್ಚು ದೇವಸ್ಥಾನಗಳ ತೆರವಿಗೆ ನೋಟಿಸ್ ನೀಡಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಅದೇ ರೀತಿ ಜನರ ಭಾವನೆಗಳನ್ನು ಗಮನದಲ್ಲಿಡಬೇಕಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ವಾಗ್ದಾಳಿ: ಹಿಂದು ಧರ್ಮ ರಕ್ಷಣೆಯ ಪೇಟೆಂಟ್ ಪಡೆದಿರುವ ಬಿಜೆಪಿ ಸರ್ಕಾರವೇ ದೇವಾಲಯಗಳನ್ನು ಒಡೆಯಲು ಪ್ರಮುಖ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯ ಧ್ವಂಸ ಮಾಡಿದ ನಂತರ ಬಿಜೆಪಿಯ ಅಂಗ ಸಂಸ್ಥೆಗಳು ಹೋರಾಟ ನಡೆಸಿರುವುದು ಅವರ ದ್ವಂದ್ವ ನಿಲುವಿಗೆ ಸಾಕ್ಷಿ ಎಂದು ಕಿಡಿಕಾರಿದರು. ಹಿಂದೆ ಅನೇಕ ಸಂದರ್ಭದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತೀರ್ಪಗಳಿದ್ದರೂ ಸಹ ಸರ್ಕಾರವೇ ರಕ್ಷಣೆ ನೀಡಿರುವ ಉದಾಹರಣೆಗಳಿವೆ. ಈಗಲೂ ಸರ್ಕಾರಕ್ಕೆ ಅಂತಹ ಅವಕಾಶ ಇದ್ದೇ ಇದೆ ಎಂದು ಅಭಿಪ್ರಾಯಪಟ್ಟರು. ದೇವಾಲಯ ಒಡೆದಿರುವುದನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳದೆ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವ ಕಡೆ ಗಮನ ಹರಿಸಲಿ, ರಾತ್ರೋರಾತ್ರಿ ಸುಪ್ರೀಂಕೋರ್ಟ್ ಆದೇಶವನ್ನು ಯಾವತ್ತು ಜಾರಿಗೆ ತರಲಾಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡು ಸರ್ಕಾರ ಮುನ್ನಡೆಯಲಿ ಎಂದರು.

ಸುಪ್ರೀಂ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ ಜರುಗಿಸಿ ದೇಗುಲ ಒಡೆಯಬಾರದು, ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡಿ, ಸಂಪುಟದಲ್ಲಿ ರ್ಚಚಿಸಿ ಎರಡು ದಿನದಲ್ಲಿ ಜಿಲ್ಲಾಡಳಿತಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗುವುದು. ಸದನಕ್ಕೆ ಎಲ್ಲ ಮಾಹಿತಿ ನೀಡಲಾಗುವುದು.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

1269 ತೆರವಿಗೆ ಗುರುತು

ಬೆಂಗಳೂರು ನಗರ 77, ಬೆಳಗಾವಿ 148, ಬಳ್ಳಾರಿ 33, ಮಂಡ್ಯ 13, ಬೀದರ್ 138, ವಿಜಯಪುರ 141, ಚಾಮರಾಜನಗರ 18, ಚಿಕ್ಕಬಳ್ಳಾಪುರ 180, ಚಿಕ್ಕಮಗಳೂರು 3, ಚಿತ್ರದುರ್ಗ 66, ದಕ್ಷಿಣ ಕನ್ನಡ 833, ದಾವಣಗೆರೆ 15), ಕೊಪ್ಪಳ 17, ಧಾರಾವಾಡ 221, ಗದಗ್ 16, ಕಲಬುರಗಿ 136, ಹಾವೇರಿ 33, ಕೊಡಗು 2, ರಾಮನಗರ 3, ರಾಯಚೂರು 59, ಉತ್ತರಕನ್ನಡ, ಯಾದಗಿರಿ, ತುಮಕೂರು ಸೇರಿದಂತೆ ಒಟ್ಟು 1269 ದೇವಾಲಯಗಳು, ಚರ್ಚ್, ಗುರುದ್ವಾರ, ಮಸೀದಿಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಗೃಹ ಇಲಾಖೆ ಜಿಲ್ಲಾಡಳಿತಕ್ಕೆ ಧಾರ್ವಿುಕ ಸ್ಥಳಗಳ ತೆರವುಗೊಳಿಸುವಂತೆ ಒತ್ತಡ ಹೇರುತ್ತಿದೆ. ತೆರವುಗೊಳಿಸಿದ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸುತ್ತಿರುವುದು ದೇವಾಲಯಗಳ ತೆರವಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಮೈಸೂರು ಜಿಲ್ಲಾಡಳಿತಕ್ಕೆ ಸರ್ಕಾರದ ನೋಟಿಸ್

ಮೈಸೂರು: ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರá-ವ ಹಿನ್ನೆಲೆಯಲ್ಲಿ ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ಜಿಲ್ಲಾಡಳಿತ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ಈ ನಡುವೆ ತೆರವು ಕಾರ್ಯಾಚರಣೆಗೆ ಕಾರಣ ಕೇಳಿ ಜಿಲ್ಲಾಡಳಿತಕ್ಕೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ನಂಜನಗೂಡು ತಾಲೂಕಿನ ಉಚ್ಚಗಣಿ ಗ್ರಾಮದಲ್ಲಿ ಆದಿಶಕ್ತಿ ಮಹದೇವಮ್ಮ ದೇವಸ್ಥಾನ ತೆರವು ಕಾರ್ಯಾಚರಣೆ ನಂತರ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ತೆರವು ಕಾರ್ಯಾಚರಣೆ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನವನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲನೆ ಮಾಡಲಿದೆ. ಏನು ಮಾಡಬಹುದೆಂಬ ಬಗ್ಗೆ ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ನಂತರ ಸರ್ಕಾರ ದೇವಾಲಯ, ಮಂದಿರ ತೆರವಿನ ಬಗ್ಗೆ ಒಂದು ತೀರ್ಮಾನ ಕೈಗೊಳ್ಳಲಿದೆ.

| ಆರ್. ಅಶೋಕ ಕಂದಾಯ ಸಚಿವ

ಬಿಜೆಪಿಯವರು ಮಾತೆತ್ತಿದರೆ ಹಿಂದು ಧರ್ಮ ಎನ್ನುತ್ತಾರೆ. ಇದಾ ಧರ್ಮವನ್ನು ಕಾಪಾಡುವ ರೀತಿ? ಯಾವುದೇ ದೇವಾಲಯ ರಾತ್ರೋರಾತ್ರಿ ನಿರ್ವಣವಾಗಿಲ್ಲ. ಆದರೆ ರಾತ್ರೋರಾತ್ರಿ ಕೆಡವಲಾಗುತ್ತಿದೆ. ತಕ್ಷಣ ತಡೆ ಹಾಕಬೇಕು.

| ಎಚ್.ಡಿ. ರೇವಣ್ಣ ಮಾಜಿ ಸಚಿವ